ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………………………….
ಹೊಸದಿಗಂತ ಆನ್ಲೈನ್ ಡೆಸ್ಕ್:
ಕೊರೋನಾ ವಿರುದ್ಧ ಹೋರಾಡಲು ವಿಶ್ವ ಆರೋಗ್ಯ ಸಂಸ್ಥೆ ಮಾಡರ್ನಾ ಸಂಸ್ಥೆಯ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿದೆ.
ಅಮೆರಿಕ ಮೂಲದ ಮಾಡರ್ನಾ ಸಂಸ್ಥೆ ಸಂಶೋಧಿಸಿರುವ mRNA ಲಸಿಕೆಯನ್ನು ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮತಿ ನೀಡಿದ್ದು, ಆ ಮೂಲಕ ಮಾಡರ್ನಾ ಲಸಿಕೆ ಕೂಡ ಅಸ್ಟ್ರಾಜೆನೆಕಾ, ವಿಶ್ವಸಂಸ್ಥೆಯಿಂದ ಅನುಮೋದನೆ ಪಡೆದಿರುವ ಫಿಜರ್-ಬಯೋಟೆಕ್ ಮತ್ತು ಜಾನ್ಸನ್ ಮತ್ತು ಜಾನ್ಸನ್ ಪಟ್ಟಿಗೆ ಸೇರಿದಂತಾಗಿದೆ.
ಚೀನಾದ ಸಿನೋಫಾರ್ಮ್ ಮತ್ತು ಸಿನೋವಾಕ್ ಲಸಿಕೆಗಳಿಗೆ ಇದೇ ರೀತಿಯ ಅನುಮೋದನೆ ಮುಂಬರುವ ದಿನಗಳಲ್ಲಿ ನಿರೀಕ್ಷಿಸಬಹುದಾಗಿದೆ ಎಂದು ಡಬ್ಲ್ಯುಎಚ್ಒ ತಿಳಿಸಿದೆ.ಇದಕ್ಕೂ ಮೊದಲೇ ಮಾಡರ್ನಾ ಸಂಸ್ಥೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಬೇಕಿತ್ತು. ಆದರೆ ಲಸಿಕೆ ತಯಾರಿಕರ ಅಂತಿಮ ಹಂತದ ಪರೀಕ್ಷಾ ದತ್ತಾಂಶಗಳು ತಜ್ಞರ ಕೈ ಸೇರುವುದು ತಡವಾದ ಹಿನ್ನಲೆಯಲ್ಲಿ ತುರ್ತು ಬಳಕೆಗೆ ಅನುಮತಿ ನೀಡುವಲ್ಲಿ ತಡವಾಗಿತ್ತು.
ತಮ್ಮದೇ ಆದ ಸುಧಾರಿತ ವೈದ್ಯಕೀಯ ನಿಯಂತ್ರಣ ಮತ್ತು ಮೌಲ್ಯಮಾಪನ ಕಚೇರಿಗಳಿಲ್ಲದ ಅನೇಕ ದೇಶಗಳು ಲಸಿಕೆಗಳನ್ನು ಬಳಸಬೇಕೆ ಎಂದು ನಿರ್ಧರಿಸಲು ವಿಶ್ವ ಆರೋಗ್ಯ ಸಂಸ್ಥೆ ಪಟ್ಟಿಯನ್ನು ಅವಲಂಬಿಸಿವೆ. ಸಾಂಕ್ರಾಮಿಕ ರೋಗದಂತಹ ತುರ್ತು ಪರಿಸ್ಥಿತಿಯಲ್ಲಿ ಲಸಿಕೆಗಳನ್ನು ಬಳಸಲು ವಿಶ್ವ ಸಂಸ್ಥೆಯ ಮಕ್ಕಳ ಘಟಕ ಯುನಿಸೆಫ್ ಸಹ ಪಟ್ಟಿಯನ್ನು ಬಳಸುತ್ತದೆ.
ಇನ್ನು ಮಾಡರ್ನಾ ಸಂಸ್ಥೆ ಈಗಾಗಲೇ ಹಲವು ದೇಶಗಳೊಂದಿಗೆ ಲಸಿಕೆ ಸರಬರಾಜಿನ ಒಪ್ಪಂದ ಮಾಡಿಕೊಂಡಿದ್ದು, ಈಗಾಗಲೇ ಲಕ್ಷಾಂತರ ಡೋಸ್ ಲಸಿಕೆಗಳನ್ನು ಸರಬರಾದು ಮಾಡುತ್ತಿದೆ ಎಂದು ಹೇಳಲಾಗಿದೆ.