Sunday, April 18, 2021

Latest Posts

ವಿಶ್ವದ ಬಿಲಿಯಾಶರ ಪ್ರಮಾಣ: ಅಮೆರಿಕ, ಚೀನಾ ಬಳಿಕದ ಸ್ಥಾನಕ್ಕೇರಿದ ಭಾರತ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ವಿಶ್ವದ ಬಿಲಿಯಾಶರ ಪಟ್ಟಿಯಲ್ಲಿ ಅಮೆರಿಕ ಮತ್ತು ಚೀನಾದ ಅನಂತರದ ಸ್ಥಾನದಲ್ಲಿ ಈಗ ಭಾರತ ಇರುವುದಾಗಿ ಫೋರ್ಬ್ಸ್ ಮ್ಯಾಗಜೀನ್ ಪ್ರಕಟಿಸಿದೆ.ಅಮೆರಿಕದ ಬಿಲಿಯಾಶರ ಸಂಖ್ಯೆ ಕಳೆದ ಒಂದು ವರ್ಷದಲ್ಲಿ ೬೧೪ರಿಂದ ೭೨೪ಕ್ಕೇರಿದ್ದರೆ, ಚೀನಾದ ಬಿಲಿಯಾಶರ ಸಂಖ್ಯೆ ೪೫೬ರಿಂದ ೬೯೮ಕ್ಕೇರಿದೆ.೧೪೦ ಬಿಲಿಯಾಶರೊಂದಿಗೆ ಭಾರತ ೩ನೇ ಸ್ಥಾನಕ್ಕೇರಿದೆ. ಜರ್ಮನಿ ೧೩೬ ಮತ್ತು ರಶ್ಯಾ ೧೧೭ಬಿಲಿಯಾಶರನ್ನು ಹೊಂದಿ ಅನಂತರದ ಸ್ಥಾನಗಳನ್ನು ಹಂಚಿಕೊಂಡಿವೆ.
ವಿಶ್ವದ ಒಟ್ಟು ೧,೧೪೯ ಬಿಲಿಯಾಶರ ಪಟ್ಟಿ ಯನ್ನು ಫೋರ್ಬ್ಸ್ ಪ್ರಕಟಿಸಿದೆ.ಈ ಪೈಕಿ ಏಶ್ಯಾ-ಫೆಸಿಪಿಕ್ ದೇಶಗಳ ಬಿಲಿಯಾಶರ ಒಟ್ಟು ಸಂಪತ್ತು ೪.೭ಟ್ರಿಲ್ಲಿಯನ್ ಡಾ.ಆಗಿದ್ದರೆ ಅಮೆರಿಕದ ಬಿಲಿಯಾಶರ ಒಟ್ಟು ಸಂಪತ್ತು ೪.೪ಟ್ರಿಲ್ಲಿಯನ್ ಡಾ.ಆಗಿದೆ.ವಿಶ್ವದ ೪೯೩ ಮಂದಿ ಹೊಸದಾಗಿ ಬಿಲಿಯಾಶರ ಪಟ್ಟಿ ಸೇರಿದ್ದಾರೆ.
ಅಮೆಜಾನ್‌ನ ಸಿಇಒ ಮತ್ತು ಸ್ಥಾಪಕ ಜೆಫ್ ಬೆಝೋಸ್ ಅವರು ಸತತ ನಾಲ್ಕನೇ ವರ್ಷಕ್ಕೂ ಅಗ್ರಸ್ಥಾನಿಯಾಗಿ ಮುಂದುವರಿದಿದ್ದಾರೆ.ಅವರ ಸಂಪತ್ತು ೧೭೭ಬಿ.ಡಾ.ಆಗಿದ್ದು, ವರ್ಷದ ಹಿಂದೆ ಇದು ೬೪ಬಿ.ಡಾ.ಇದ್ದು ಕೇವಲ ಒಂದು ವರ್ಷದಲ್ಲೇ ಇದು ಮೂರು ಪಟ್ಟು ಹೆಚ್ಚಾಗಿದೆ. ೨ನೇ ಸ್ಥಾನದಲ್ಲಿ ಸ್ಪೇಸೆಕ್ಸ್ ಸಂಸ್ಥಾಪಕ ಎಲಾನ್ ಮಸ್ಕ್ ಇದ್ದು ಇವರ ಸಂಪತ್ತು ೧೫೧ಬಿ.ಡಾ.ಗೇರಿದೆ.ವರ್ಷದ ಹಿಂದೆ ಅವರ ಸಂಪತ್ತು ಕೇವಲ ೨೪.೬ಬಿ.ಇದ್ದು ಅವರು ೩೪ನೇ ರ್‍ಯಾಂಕ್‌ನಲ್ಲಿದ್ದರು. ಇದೀಗ ೧೨೬.೪ಬಿ.ಡಾ.ಅಧಿಕ ಸಂಪತ್ತು ಸೇರಿ ೧೫೧ಬಿ.ಡಾ.ಗೇರಿದೆ.
ಭಾರತದ ಮುಕೇಶ್ ಅಂಬಾನಿ ಅವರು ವಿಶ್ವದ ೧೦ನೇ ರ್‍ಯಾಂಕ್‌ನಲ್ಲಿದ್ದು ಏಶ್ಯಾದ ಅತ್ಯಂತ ಶ್ರೀಮಂತ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ .ಏಶ್ಯಾದ ನಂ.೧ಶ್ರೀಮಂತ ಎಂದು ಗುರುತಿಸಿಕೊಂಡಿದ್ದ ಚೀನಾದ ದೈತ್ಯ ಉದ್ಯಮಿ ಜಾಕ್ ಮಾ ಅವರನ್ನು ಅಲ್ಲಿನ ಸರಕಾರ ದಮನಿಸಲು ಮುಂದಾದ ಬಳಿಕ ಅವರ ಸ್ಥಾನವೂ ಕುಸಿದಿದ್ದು, ಅವರೀಗ ೨೬ನೇ (ಕಳೆದ ವರ್ಷ ೧೭ನೇ ಸ್ಥಾನದಲ್ಲಿದ್ದಾರೆ)ಸ್ಥಾನಕ್ಕೆ ಕುಸಿದಿದ್ದಾರೆ. ಅವರ ಸಂಪತ್ತಿನ ಪ್ರಮಾಣ ೧೦ಬಿ.ಡಾ.ಹೆಚ್ಚಾಗಿ ೪೮.೪ಬಿ.ಡಾ.ಗೇರಿದ್ದರೂ ಒಟ್ಟಾರೆಯಾಗಿ ಅವರ ಸಂಸ್ಥೆಯ ಶೇರು ಮೌಲ್ಯ ಕುಸಿದಿದೆ.ಅವರ ಸ್ಥಾನಕ್ಕೀಗ ಅಂಬಾನಿ ಬಂದಿದ್ದಾರೆ .ಅಂಬಾನಿ ಅವರ ಸಂಪತ್ತು ೮೪.೫ಬಿ.ಡಾ.ಆಗಿದೆ.
ದೇಶದ ಎರಡನೇ ಅತಿಶ್ರೀಮಂತ ಎನಿಸಿಕೊಂಡಿರುವ ಅದಾನಿ ಗುಂಪಿನ ಗೌತಮ್ ಅದಾನಿ ವಿಶ್ವದ ೨೪ನೇ ರ್‍ಯಾಂಕ್‌ನಲ್ಲಿದ್ದು ಅವರ ಸಂಪತ್ತು ೫೦.೫ಬಿ.ಡಾ.ಆಗಿದೆ. ಸೇರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸ್ಥಾಪಕ ಹಾಗೂ ಪೂನಾವಾಲ್ಲಾ ಗ್ರೂಪ್‌ನ ಅಧ್ಯಕ್ಷ ಸೈರಸ್ ಪೂನಾವಾಲ್ಲಾ ವಿಶ್ವದ ೧೬೯ನೇ ರ್‍ಯಾಂಕ್‌ನಲ್ಲಿದ್ದು ಇವರ ಸಂಪತ್ತು ೧೨.೭ಬಿ.ಡಾ.ಆಗಿದೆ.ಭಾರತದಲ್ಲಿ ಇವರು ೭ನೇ ಸ್ಥಾನದಲ್ಲಿದ್ದಾರೆ. ಎಚ್‌ಸಿಎಲ್ ಟೆಕ್ನಾಲಜಿಯ ಶಿವ ನಾಡಾರ್ ಅವರು ಭಾರತದ ೩ನೇ ಅತಿ ಶ್ರೀಮಂತ ವ್ಯಕ್ತಿಯಾಗಿದ್ದು, ೨೩.೫ಬಿ.ಡಾ.ಸಂಪತ್ತಿನೊಂದಿಗೆ ವಿಶ್ವದ ೭೧ನೇ ಸ್ಥಾನದಲ್ಲಿದ್ದಾರೆ.
ಪ್ರತಿ ೧೭ಗಂಟೆಗೆ ಒಬ್ಬರಂತೆ ಬಿಲಿಯಾಶರು ಪಟ್ಟಿಗೆ ಸೇರುತ್ತಿದ್ದು ಇವರಲ್ಲಿ ೨೧೦ಮಂದಿ ಚೀನಾ,ಹಾಂಕಾಂಗ್‌ಗೆ ಸೇರಿದ್ದರೆ, ೯೮ಮಂದಿ ಅಮೆರಿಕನ್ನರಾಗಿದ್ದಾರೆ . ಫ್ರಾನ್ಸ್‌ನ ಬೆರ್ನಾರ್ಡ್ ಆರ್ನಾಲ್ಟ್ ೧೫೦ಬಿ.ಡಾ.ನೊಂದಿಗೆ ೩ನೇ ಮತ್ತು ಬಿಲ್ ಗೇಟ್ಸ್ ೧೨೪ಬಿ.ಡಾ.ನೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ .ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಝುಕರ್‌ಬರ್ಗ್ ೯೭ಬಿ.ಡಾ.ನೊಂದಿಗೆ ೫ನೇ ಸ್ಥಾನಕ್ಕೇರಿದ್ದಾರೆ.
ಭಾರತೀಯ ಶ್ರೀಮಂತರ ಪಟ್ಟಿಯಲ್ಲಿ ಡಿಮಾರ್ಟ್‌ನ ಸಂಸ್ಥಾಪಕ ರಾಧಾಕಿಶನ್ ದಮಾನಿ, ಕೋಟಕ್ ಮಹೀಂದ್ರಾ ಬ್ಯಾಂಕ್ ಸಿಇಒ ಉದಯ ಕೋಟಕ್, ಆರ್ಸೆಲ್ ಮಿತ್ತಲ್‌ನ ಲಕ್ಷ್ಮಿ ಮಿತ್ತಲ್, ಆದಿತ್ಯಾ ಬಿರ್ಲಾ ಗುಂಪಿನ ಕುಮಾರ ಮಂಗಲಂ ಬಿರ್ಲಾ, ಸನ್ ಫಾರ್ಮಾಸ್ಯುಟಿಕಲ್ಸ್‌ನ ದಿಲೀಪ್ ಷಾಂಘ್ವಿ, ಭಾರತಿ ಎಟರ್‌ಪ್ರೈಸಸ್‌ನ ಸುನಿಲ್ ಮಿತ್ತಲ್, ವಿಪ್ರೋದ ಅಜೀಂ ಪ್ರೇಮ್‌ಜಿ, ನಂದನ್ ನೀಲೆಕಣಿ ಮತ್ತಿತರರು ಸೇರಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss