ಕೇಂದ್ರ ಕ್ರೀಡಾ ಸಚಿವರೊಂದಿಗಿನ ಮಾತುಕತೆ ಸಫಲ: ತಾತ್ಕಾಲಿಕವಾಗಿ ಧರಣಿ ಕೈಬಿಟ್ಟ ಕುಸ್ತಿಪಟುಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕಳೆದ ಮೂರು ದಿನಗಳಿಂದ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದು, ತಾತ್ಕಾಲಿಕವಾಗಿ ಕುಸ್ತಿಪಟುಗಳು ಧರಣಿ ಕೈಬಿಟ್ಟಿದ್ದಾರೆ. ಬ್ರಿಜ್ ಭೂಷಣ್ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ(#Mee Too) ನೀಡಿದ್ದಾರೆ ಎಂದು ಆರೋಪಿಸಿದ್ದು, ಕೂಡಲೇ ಅವರನ್ನು ಕುಸ್ಥಿ ಸಂಸ್ಥೆಯ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸುವಂತೆ ಆಕ್ರೋಶ ವ್ಯಕ್ತವಾಗಿತ್ತು. ಈ ಪ್ರತಿಭಟನೆಯಲ್ಲಿ ಭಾರತದ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಭಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ಸೇರಿದಂತೆ 30 ಜನರು ಪಾಲ್ಗೊಂಡಿದ್ದರು. ಕಳೆದ ಎರಡು ದಿನಗಳಿಂದ ಕೇಂದ್ರ ಕ್ರೀಡಾ ಸಚಿವರು ಹಾಗೂ ಇತರೆ ಅಧಿಕಾರಿಗಳು ಮಾತುಕತೆ ನಡೆಸಿದರೂ ಯಾವುದೇ ಫಲ ಕಾಣಲಿಲ್ಲ.

ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಶುಕ್ರವಾರ ತಡರಾತ್ರಿ ದೆಹಲಿಯ ತಮ್ಮ ನಿವಾಸದಲ್ಲಿ ಕುಸ್ತಿಪಟುಗಳೊಂದಿಗೆ ಎರಡನೇ ಸುತ್ತಿನ ಮಾತುಕತೆ ನಡೆಸಿದರು. ಈ ಚರ್ಚೆಗಳು ಸುಮಾರು 7 ಗಂಟೆಗಳ ಕಾಲ ಮುಂದುವರೆಯಿತು. ಚರ್ಚೆಯ ನಂತರ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಕುಸ್ತಿಪಟುಗಳೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ವಾನುಮತದಿಂದ ಮೇಲ್ವಿಚಾರಣಾ ಸಮಿತಿ ರಚಸಲು ನಿರ್ಧರಿಸಲಾಗಿದ್ದು, ಇದರಲ್ಲಿ ಭಾಗಿಯಾದವರ ಹೆಸರನ್ನು ಭಾನುವಾರ ಪ್ರಕಟಿಸಲಾಗುವುದು ಎಂದರು. ಸಮಿತಿಯು ನಾಲ್ಕು ವಾರಗಳಲ್ಲಿ ತನ್ನ ವಿಚಾರಣೆಯನ್ನು ಪೂರ್ಣಗೊಳಿಸುತ್ತದೆ ಮತ್ತು ಡಬ್ಲ್ಯುಎಫ್‌ಐ ಮುಖ್ಯಸ್ಥನ ವಿರುದ್ಧ ಹೊರಿಸಲಾದ ಎಲ್ಲಾ ಆರೋಪಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತದೆ ಎಂದು ಹೇಳಿದರು.

ಸುಮಾರು ಏಳು ಗಂಟೆಗಳ ಕಾಲ ಕುಸ್ತಿಪಟುಗಳೊಂದಿಗೆ ಚರ್ಚೆ ನಡೆಸಲಾಯಿತು. ಕುಸ್ತಿಪಟುಗಳ ಆರೋಪದ ನಂತರ ನಾವು ಡಬ್ಲ್ಯುಎಫ್‌ಐಗೆ ನೋಟಿಸ್ ಕಳುಹಿಸಿದ್ದೇವೆ ಮತ್ತು 72 ಗಂಟೆಗಳ ಒಳಗೆ ಉತ್ತರವನ್ನು ಕೇಳಿದ್ದೇವೆ ಎಂದರು. ಈ ಚರ್ಚೆಗಳ ಭಾಗವಾಗಿ ತನಿಖೆ ಪೂರ್ಣಗೊಳ್ಳುವವರೆಗೂ ಕುಸ್ತಿ ಸಂಘದ ಅಧ್ಯಕ್ಷ ಬ್ರಿಜ್ ಭೂಷಣ್ ಅವರು ಸಂಘದ ದೈನಂದಿನ ಚಟುವಟಿಕೆಗಳಿಂದ ದೂರ ಉಳಿದು ತನಿಖೆಗೆ ಸಹಕರಿಸುವುದಾಗಿ ಕೇಂದ್ರ ಸಚಿವರು ಕುಸ್ತಿಪಟುಗಳಿಗೆ ಭರವಸೆ ನೀಡಿದ್ದಾರೆ. ಸಮಿತಿಯ ತನಿಖಾ ವರದಿ ನಾಲ್ಕು ವಾರಗಳಲ್ಲಿ ಬರಲಿದ್ದು, ವರದಿ ಆಧರಿಸಿ ಸಮಸ್ಯೆಯನ್ನು ಮುಂದಕ್ಕೆ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.

ಭಾರತದ ಕುಸ್ತಿಪಟು ಬಜರಂಗ್ ಪುನಿಯಾ ಮಾತನಾಡಿ, ಕೇಂದ್ರ ಕ್ರೀಡಾ ಸಚಿವರು ತಮ್ಮ ಬೇಡಿಕೆಗಳನ್ನು ಆಲಿಸಿದ್ದಾರೆ ಮತ್ತು ಸೂಕ್ತ ತನಿಖೆ ನಡೆಸಲಾಗುವುದು ಎಂದು ನಮಗೆ ಭರವಸೆ ನೀಡಿದ್ದಾರೆ. ತಮ್ಮ ಸಮಸ್ಯೆಗಳನ್ನು ಆಲಿಸಿ, ಪರಿಹರಿಸುವ ಭರವಸೆ ನೀಡಿದ ಕೇಂದ್ರ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು. ನ್ಯಾಯಯುತವಾದ ವಿಚಾರಣೆ ನಡೆಯುತ್ತದೆ ಎಂದು ನಾವು ಭಾವಿಸುತ್ತೇವೆ ಮತ್ತು ಆದ್ದರಿಂದ ನಾವು ವಿಚಾರಣೆ ಪೂರ್ಣಗೊಳ್ಳುವವರೆಗೆ ನಮ್ಮ ಪ್ರತಿಭಟನೆಯನ್ನು ಸ್ಥಗಿತಗೊಳಿಸುತ್ತೇವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!