ಚೀನಾ ಸೇನೆಗೆ ಯುದ್ಧಕ್ಕೆ ಸಿದ್ಧವಾಗಲು ಕರೆನೀಡಿದ ಕ್ಸಿ ಜಿನ್‌ಪಿಂಗ್: ವರದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಚೀನಾದ ಅಧ್ಯಕ್ಷರಾಗಿ ಮೂರನೇ ಬಾರಿಗೆ ಆಯ್ಕೆಯಾಗಿರುವ ಷಿ ಜಿನ್‌ಪಿಂಗ್, ʼತನ್ನೆಲ್ಲ ಶಕ್ತಿಯನ್ನು ಕೇಂದ್ರೀಕರಿಸಿʼ ಯುದ್ಧದ ಸಿದ್ಧತೆಯಲ್ಲಿ ತೊಡಗುವಂತೆ ಚೀನಾ ಸೇನೆ ʼಪೀಪಲ್ಸ್ ಲಿಬರೇಶನ್ ಆರ್ಮಿʼಗೆ ಸೂಚಿಸಿದ್ದಾರೆ ಎಂದು ಚೀನಾದ ಕಮ್ಯುನಿಸ್ಟ್ ಪಕ್ಷದ ಮುಖವಾಣಿ ಹೇಳಿದೆ.
ಇತ್ತೀಚೆಗೆ ಕಮಾಂಡ್ ಸೆಂಟರ್‌ಗೆ ಭೇಟಿ ನೀಡಿದ ಕ್ಸಿ ಜಿನ್‌ಪಿಂಗ್, ಸೈನ್ಯವು “ಯುದ್ಧದ ತಯಾರಿಯಲ್ಲಿ ದೊಡ್ಡ ಮಟ್ಟದಲ್ಲಿ ತೊಡಗಬೇಕು. ಮಿಲಿಟರಿ ತರಬೇತಿಯನ್ನು ಸಮಗ್ರವಾಗಿ ಬಲಪಡಿಸಬೇಕು” ಎಂದು ಹೇಳಿದ್ದಾರೆ.
ಚೀನಾ ದಿಗಂತದಲ್ಲಿ ʼಅಪಾಯಕಾರಿ ಬಿರುಗಾಳಿಗಳʼ ಮುನ್ಸೂಚನೆ ಇದೆ ಎಂದು ಜಿನ್‌ಪಿಂಗ್ ಸೇನೆಗೆ ಎಚ್ಚರಿಸಿದ್ದಾರೆ.
“ನಿಮ್ಮ ಎಲ್ಲಾ ಶಕ್ತಿಯನ್ನು ಹೋರಾಟದ ಮೇಲೆ ಕೇಂದ್ರೀಕರಿಸಿ, ವಿಶ್ರಮಿಸದೆ ಹೋರಾಡಿ, ಮತ್ತು ನಿಮ್ಮ ಗೆಲ್ಲುವ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಿ” ಎಂದು ಕ್ಸಿ ಜಿನ್‌ಪಿಂಗ್ ಸೂಚಿಸಿದ್ದಾರೆ. ಚೀನಾ “ಅಸ್ಥಿರ ಮತ್ತು ಅನಿಶ್ಚಿತ” ಭದ್ರತಾ ಪರಿಸ್ಥಿತಿಯಲ್ಲಿರುವ ಕಾರಣ ಸೇನೆಯು “ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ರಾಷ್ಟ್ರೀಯ ಭದ್ರತೆಯನ್ನು ದೃಢವಾಗಿ ರಕ್ಷಿಸಬೇಕು” ಎಂದು ಅವರು ಕರೆ ನೀಡಿದ್ದಾರೆ.
ಕಮ್ಯುನಿಸ್ಟ್ ಪಕ್ಷದ ಸಭೆಯಲ್ಲಿ, ಕ್ಸಿ ಜಿನ್‌ಪಿಂಗ್ ಅವರು ತೈವಾನ್‌ಗೆ ಅಮೇರಿಕದಿಂದ ಪ್ರಬಲ ಬೆಂಬಲ ವ್ಯಕ್ತವಾಗುತ್ತಿರುವ ಬಗ್ಗೆ ಕಿಡಿಕಾರಿದ್ದಾರೆ. ʼವಿದೇಶಿ ಹಸ್ತಕ್ಷೇಪʼ ನಮ್ಮ ನಡುವಿನ ಉದ್ವಿಗ್ನತೆಯನ್ನು ಉಲ್ಬಣಗೊಳಿಸುತ್ತಿದೆ ಎಂದು ಅಮೆರಿಕವನ್ನು ದೂಷಿಸಿದ್ದಾರೆ. ತೈವಾನ್ ಅನ್ನು ವಶಪಡಿಸಿಕೊಳ್ಳುವುದನ್ನು ನಮ್ಮ ಪರಂಪರೆಯ ಪ್ರಮುಖ ಭಾಗವಾಗಿ ನೋಡುತ್ತಿದ್ದೇವೆ ಎಂದು ಕ್ಸಿ ಜಿನ್‌ಪಿಂಗ್ ಹೇಳಿದ್ದಾರೆ. ಜೊತೆಗೆ “ಬಲದ ಬಳಕೆಯನ್ನು ಮಾಡಲು ನಾವು ಎಂದಿಗೂ ಹಿಂದೇಟು ಹಾಕುವುದಿಲ್ಲ ಎಂದು ನೇರ ಸಂದೇಶ ರವಾನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!