ಯುವತಿ ಹತ್ಯೆ ಪ್ರಕರಣ: ಇನ್ನೂ ಪತ್ತೆಯಾಗದ ಆರೋಪಿಯ ಸುಳಿವು!

ಹೊಸದಿಗಂತ ವರದಿ, ಮಡಿಕೇರಿ:

ವೀರಾಜಪೇಟೆ ಸಮೀಪದ ನಾಂಗಾಲ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದ ಯುವತಿಯೊಬ್ಬಳ ಕೊಲೆ ಪ್ರಕರಣದ ಆರೋಪಿಗಾಗಿ ಮಂಗಳವಾರವೂ ಶೋಧ ಕಾರ್ಯ ಮುಂದುವರಿದಿದೆ.
ಬಿಟ್ಟಂಗಾಲ ಸಮೋಪದ ನಾಂಗಾಲ ಗ್ರಾಮದ ನಿವಾಸಿ ಬುಟ್ಟಿಯಂಡ ಮಾದಪ್ಪ ಎಂಬವರ ಪುತ್ರಿ ಆರತಿ (24) ಎಂಬಾಕೆಯನ್ನು ಭಾನುವಾರ ಸಂಜೆಗತ್ತಲಲ್ಲಿ ಕತ್ತಿಯಿಂದ ಕಡಿದು, ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿತ್ತು.
ಕಂಡಂಗಾಲ ಗ್ರಾಮದ ತಮ್ಮಯ್ಯ ಅಲಿಯಾಸ್ ತವಿ ಎಂಬಾತ ಆಕೆಗೆ ಕರೆ ಮಾಡಿ ಮನೆಯಿಂದ ಹೊರಗೆ ಕರೆದು ಬಳಿಕ ಹತ್ಯೆ ಮಾಡಿರಬಹುದೆಂದು ಶಂಕಿಸಲಾಗಿತ್ತು
ಇದಕ್ಕೆ ಪೂರಕವೆಂಬಂತೆ ಆರತಿ ಕೊಲೆಯಾದ ಸ್ಥಳದಿಂದ ಅನತಿ ದೂರದಲ್ಲಿ ವ್ಯಕ್ತಿಯ ಹೆಲ್ಮೆಟ್ ಪತ್ತೆಯಾಗಿದ್ದು, ಅದು ತಮ್ಮಯ್ಯ ಅಲಿಯಾಸ್ ತವಿ ಎಂಬಾತನಿಗೆ ಸೇರಿದ್ದೆಂದು ಗುರುತಿಸಲಾಗಿತ್ತು.
ಅಲ್ಲದೆ ಶಂಕಿತ ಆರೋಪಿ ಮೂರು ದಿನಗಳಿಂದ ಆರತಿಗೆ ಕಿರುಕುಳ ನೀಡುತ್ತಿದ್ದ ಎಂದೂ ಹೇಳಲಾಗುತ್ತಿಲ್ಲದೆ, ಕೊಲೆಯಾದ ಯುವತಿಗೆ ಕೊನೆ ಬಾರಿ ಈತ ಕಾಲ್ ಮಾಡಿದ್ದನೆಂಬುದು ತನಿಖೆ ವೇಳೆ ತಿಳಿದು ಬಂದಿದೆ.
ಆತನೇ ಆರತಿಯನ್ನು ಹತ್ಯೆ ಮಾಡಿರುವ ಸಂಶಯದ ಮೇರೆಗೆ ಪೋಲಿಸರು ಕಂಡಂಗಾಲದಲ್ಲಿರುವ ಅರೋಪಿಯ ಮನೆಯಲ್ಲಿ ವಿಚಾರಿಸಿದಾಗ, ಯುವಕನು ಮನೆಯಿಂದ ಹೊರಡುವಾಗ ಹೆಲ್ಮೆಟ್ ಧರಿಸಿದ್ದು ಬರುವಾಗ ಅದು ಇರಲಿಲ್ಲ ಎಂಬುದನ್ನು ಆರೋಪಿಯ ತಾಯಿ ಬಹಿರಂಗಪಡಿಸಿದ್ದಾರೆ. ಆತನ ಮನೆಯ ಸಮೀಪದಲ್ಲಿರುವ ಕೆರೆಯ ಬಳಿ ಅರೋಪಿ ಬಳಸುತ್ತಿದ್ದ ಚಪ್ಪಲಿ ಮತ್ತು ಒಂದು ಮೊಬೈಲ್ , ಖಾಲಿ ಮದ್ಯದ ಬಾಟಲಿ ಹಾಗೂ ಅರ್ಧ ಖಾಲಿಯಾಗಿರುವ ವಿಷದ ಬಾಟಲಿ ದೊರಕಿದ್ದು, ಈ ಹಿನ್ನೆಲೆಯಲ್ಲಿ ಆತ ಆತ್ಮಹತ್ಯೆ ಮಾಡಿಕೊಂಡಿರಬಹುದಾದ ಸಂಶಯದ ಮೇರೆಗೆ ಪೊಲೀಸರು ಸೋಮವಾರ ಬೆಳಗಿನಿಂದ ಸಂಜೆಯವರೆಗೆ ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ಲಭ್ಯವಾಗಿರಲಿಲ್ಲ.
ಆರತಿಯನ್ನು ಕೊಂದ ಬಳಿಕ ಆರೋಪಿ ಮದ್ಯದೊಂದಿಗೆ ವಿಷವನ್ನು ಸೇವಿಸಿ ಬಳಿಕ ತನ್ನ ಮನೆ ಬಳಿಯೇ ಇರುವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಸಂಶಯದ ಮೇರೆಗೆ ಮಂಗಳವಾರ ಕೆರೆಯ ನೀರು ಖಾಲಿ ಮಾಡಿ ಆರೋಪಿ ತಿಮ್ಮಯ್ಯನಿಗಾಗಿ ಶೋಧ ನಡೆಸಲಾಗಿದೆ. ಆದರೂ ಆತನ ಬಗ್ಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ. ಕೆರೆಯ ಬಳಿ ವೀರಾಜಪೇಟೆ ಪೊಲೀಸರು ಬೀಡು ಬಿಟ್ಟಿದ್ದು, ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಈ ನಡುವೆ ಆರೋಪಿಯು ಪೊಲೀಸರ ದಿಕ್ಕು ತಪ್ಪಿಸುವ ನಾಟಕವಾಡಿರುವ ಬಗ್ಗೆಯೂ ಸಂಶಯ ವ್ಯಕ್ತವಾಗಿದೆ. ಆರೋಪಿಯು ಈ ಹಿಂದೆ ಬೆಂಗಳೂರಿನಲ್ಲಿ ನಡೆದ‌ ದರೋಡೆ‌ ಪ್ರಕರಣವೊಂದರಲ್ಲಿ ಭಾಗಿಯಾಗಿ ಜೈಲು ಶಿಕ್ಷೆ ಅನುಭವಿಸಿ ಬಂದಿರುವನೆಂದು ಹೇಳಲಾಗಿದ್ದು, ಯುವತಿಯ ಹತ್ಯೆ ಪ್ರಕರಣದಲ್ಲಿ ಈತನೊಬ್ಬನೇ ಭಾಗಿಯಾಗಿದ್ದಾನೋ ಅಥವಾ ಇನ್ನೊಬ್ಬರ ನೆರವು ಪಡೆದಿದ್ದಾನೆಯೇ ಎಂಬ ಬಗ್ಗೆಯೂ ಜನವಲಯದಲ್ಲಿ ಚರ್ಚೆಯಾಗುತ್ತಿದೆ.
ಒಟ್ಟಾರೆಯಾಗಿ ಪೊಲೀಸರಿಗೆ ಇದೊಂದು ಪ್ರಕರಣ ತಲೆ ನೋವಾಗಿ ಪರಿಣಮಿಸಿದ್ದು, ಯುವತಿಯ ಮೊಬೈಲ್’ನಲ್ಲಿ ದೊರೆತ ಮಾಹಿತಿಯ ಅನ್ವಯ ವಿವಿಧ ಕೋನಗಳಿಂದ ಹಂತಕರ ಪತ್ತೆಗೆ ವ್ಯಾಪಕ ಬಲೆ ಬೀಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!