ಯುವಜನತೆ NCC ಸೇರ್ಪಡೆಯಾಗಿ: ಮನ್‌ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಮನವಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅವರು ಜನಪ್ರಿಯ ರೇಡಿಯೊ ಕಾರ್ಯಕ್ರಮ ಮನ್‌ ಕಿ ಬಾತ್ ಕಾರ್ಯಕ್ರಮದ 116ನೇ ಸಂಚಿಕೆಯನ್ನು ಉದ್ದೇಶಿಸಿ ಇಂದು ಮಾತನಾಡಿದರು.

ಈ ಸಂದರ್ಭ ಯುವ ಸಮುದಾಯಕ್ಕೆ ಎನ್‌ಸಿಸಿ ಸೇರ್ಪಡೆಯಾಗುವಂತೆ ಮನವಿ ಮಾಡಿಕೊಂಡರು.

ಇಂದು ಎನ್‌ಸಿಸಿ ದಿನವಾಗಿದೆ. ನಾನು ಸಹ ಎನ್‌ಸಿಸಿ ಕೆಡೆಟ್ ಆಗಿದ್ದು, ಅದರ ಅನುಭವಗಳು ತುಂಬಾ ಅಮೂಲ್ಯವಾದದ್ದು. ಎನ್‌ಸಿಸಿ ಯುವಕರಲ್ಲಿ ಶಿಸ್ತು, ನಾಯಕತ್ವ ಮತ್ತು ಸೇವಾ ಮನೋಭಾವವನ್ನು ಮೂಡಿಸುತ್ತದೆ. ದೇಶದಲ್ಲಿ ಎಲ್ಲಿಯಾದ್ರೂ ಅನಾಹುತ ಸಂಭವಿಸಿದಾಗ ಎನ್‌ಸಿಸಿ ಕೆಡೆಟ್‌ಗಳು ಮುಂದೆ ಬರುತ್ತಾರೆ ಎಂದು ಶ್ಲಾಘಿಸಿದರು.

ಪ್ರತಿ ವರ್ಷ ಜನವರಿ 12ರಂದು ಸ್ವಾಮಿ ವಿವೇಕಾನಂದರ ಜಯಂತಿಯನ್ನು ಯುವ ದಿನ ಎಂದು ಆಚರಿಸುತ್ತೇವೆ. ಮುಂದಿನ ವರ್ಷ 162ನೇ ಸ್ವಾಮಿ ವಿವೇಕಾನಂದ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಗುವುದು. ಜನವರಿ 11-12ರಂದು ದೆಹಲಿಯ ಭಾರತ್ ಮಂಟಪದಲ್ಲಿ ಯುವ ನಾಯಕರ ವಿಕಾಸ್ ಭಾರತ್ ಸಂವಾದ ಆಯೋಜನೆ ಮಾಡಲಾಗುತ್ತದೆ. ರಾಜಕೀಯದಲ್ಲಿಲ್ಲದ ಕುಟುಂಬದ ಜನರು ಸಹ ರಾಜಕಾರಣಕ್ಕೆ ಬರಬೇಕು. ಮುಂದೆಯೂ ಯುವಕರಿಗಾಗಿ ವಿಶೇಷ ಅಭಿಯಾನಗಳನ್ನು ಆಯೋಜನೆ ಮಾಡಲಾಗುವುದು ಎಂದು ಹೇಳಿದರು.

ಹಿರಿಯ ನಾಗರಿಕರಿಗೆ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ನೀಡಲು ಸಹಾಯ ಮಾಡುತ್ತಿರುವ ಲಕ್ನೋ ನಿವಾಸಿ ವೀರೇಂದ್ರ ಅವರ ಕಾರ್ಯವನ್ನು ಶ್ಲಾಘಿಸಿದ ಪ್ರಧಾನಿ, ಡಿಜಿಟಲ್ ಲೈಫ್ ಸರ್ಟಿಫಿಕೇಟ್‌ನಿಂದ ವಯೋವೃದ್ಧರಿಗೆ ಪಿಂಚಣಿ ಪಡೆಯಲು ಸಹಾಯ ಆಗುತ್ತದೆ. ಮಧ್ಯಪ್ರದೇಶದ ಭೋಪಾಲ್ ನಿವಾಸಿ ಮಹೇಶ್ ಎಂಬವರು ಹಿರಿಯ ನಾಗರಿಕರಿಗೆ ಮೊಬೈಲ್ ಮೂಲಕ ಹಣ ಪಾವತಿ ಮಾಡೋದನ್ನು ಕಲಿಸುತ್ತಿದ್ದಾರೆ ಎಂದು ತಿಳಿಸಿದರು.

ಮಕ್ಕಳಲ್ಲಿ ಓದುವ ಮತ್ತು ಕಲಿಯುವ ಹವ್ಯಾಸವನ್ನು ಬೆಳೆಸುತ್ತಿರುವ ಚೆನ್ನೈನ ಪ್ರಕೃತಿ ಅರಿವಾಗಮ್ ಮತ್ತು ಬಿಹಾರದ ಗೋಪಾಲ್‌ಗಂಜ್‌ನ ಪ್ರಯೋಗ್ ಗೃಂಥಾಲಯದ ಕುರಿತಾಗಿಯೂ ಪ್ರಧಾನಿಗಳು ಮಾತನಾಡಿದರು.

ದಕ್ಷಿಣ ಅಮೆರಿಕಾದ ಗಯಾನಾದಲ್ಲಿ ಅಧ್ಯಕ್ಷ ಇರ್ಫಾನ್ ಅಲಿ ಸೇರಿದಂತೆ ವಿದೇಶಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ಸಂರಕ್ಷಿಸುವ ಮತ್ತು ಪ್ರಚಾರ ಮಾಡುವಲ್ಲಿ ಭಾರತೀಯ ಮೂಲದ ಪ್ರಜೆಗಳ ಕೊಡುಗೆಯನ್ನು ಉದ್ದೇಶಿಸಿ ಮಾತನಾಡಿದರು. ‘ಭಾರತದಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಗಯಾನಾದಲ್ಲಿ ‘ಮಿನಿ ಇಂಡಿಯಾ’ ಸಹ ಅಸ್ತಿತ್ವದಲ್ಲಿದೆ. ಸುಮಾರು 180 ವರ್ಷಗಳ ಹಿಂದೆ, ಗಯಾನಾದಲ್ಲಿ ಕೆಲಸ ಮಾಡಲು ಮತ್ತು ಇತರ ಕೆಲಸಗಳಿಗಾಗಿ ಭಾರತದಿಂದ ಜನರನ್ನು ಕರೆದೊಯ್ಯಲಾಯಿತು. ಇಂದು ಗಯಾನಾದಲ್ಲಿ ಭಾರತೀಯ ಮೂಲದ ಜನರು ರಾಜಕೀಯ, ವ್ಯಾಪಾರ, ಶಿಕ್ಷಣ ಮತ್ತು ಸಂಸ್ಕೃತಿಯ ಪ್ರತಿಯೊಂದು ಕ್ಷೇತ್ರದಲ್ಲೂ ಗಯಾನಾವನ್ನು ಮುನ್ನಡೆಸುತ್ತಿದ್ದಾರೆ. ಗಯಾನಾದ ಅಧ್ಯಕ್ಷ ಡಾ ಇರ್ಫಾನ್ ಅಲಿ ಅವರು ಭಾರತೀಯ ಮೂಲದವರು, ಅವರು ತಮ್ಮ ಭಾರತೀಯ ಪರಂಪರೆಯ ಬಗ್ಗೆ ಹೆಮ್ಮೆಪಡುತ್ತಾರೆ’, ಎಂದು ಹೇಳಿದರು.

ಏಕ್ ಪೇಡ್ ಮಾ ಕೆ ನಾಮ್ ಅಭಿಯಾನದ ಬಗ್ಗೆಯೂ ಪ್ರಸ್ತಾಪಿಸಿದ ಪ್ರಧಾನಿ, ಈ ಅಭಿಯಾನದ ಅಡಿಯಲ್ಲಿ ಕೇವಲ ಐದು ತಿಂಗಳಲ್ಲಿ 100 ಕೋಟಿ ಮರಗಳನ್ನು ನೆಡಲಾಗಿದೆ. ಗುಬ್ಬಚ್ಚಿಗಳ ಸಂಖ್ಯೆಯನ್ನು ಹೆಚ್ಚಿಸಲು ಕೆಲಸ ಮಾಡುತ್ತಿರುವ ಚೆನ್ನೈನ ಕೂಡುಗಲ್ ಟ್ರಸ್ಟ್ ಬಗ್ಗೆಯೂ ಪ್ರಧಾನಿ ಪ್ರಸ್ತಾಪಿಸಿದರು. ನಮ್ಮ ಸುತ್ತಲಿನ ಜೀವವೈವಿಧ್ಯವನ್ನು ಕಾಪಾಡುವಲ್ಲಿ ಈ ಪಕ್ಷಿ ಮುಖ್ಯವಾಗಿದೆ.

ಮೈಸೂರಿನ ಅರ್ಲಿ ಬರ್ಡ್​ ಸಂಸ್ಥೆಯ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಈ ಸಂಸ್ಥೆಯು ಮಕ್ಕಳಿಗೆ ಪಕ್ಷಿ, ಪ್ರಕೃತಿಯ ಮಹತ್ವವನ್ನು ತಿಳಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ 116ನೇ ಮನ್​ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಿಗೆ ನೇಚರ್ ಎಜುಕೇಷನ್ ನೀಡುತ್ತಿರುವ ಸಂಸ್ಥೆ ಇದಾಗಿದ್ದು, ನಗರದಲ್ಲಿರುವ ಮಕ್ಕಳನ್ನು ಹಳ್ಳಿಗಳಿಗೆ ಕರೆದೊಯ್ದು ಪಕ್ಷಿ ಸಂಕುಲದ ಪರಿಚಯ ಮಾಡಿಕೊಡುವುದಷ್ಟೇ ಅಲ್ಲದೆ ಅದರಿಂದಾಗುವ ಪ್ರಯೋಜನಗಳ ಬಗ್ಗೆಯೂ ತಿಳಿ ಹೇಳುತ್ತಿದ್ದು, ಉತ್ತಮ ನಾಗರಿಕರನ್ನಾಗಿ ಮಾಡಲು ಶ್ರಮ ಪಡುತ್ತಿದ್ದಾರೆ. ಅರ್ಲಿ ಬರ್ಡ್​ ಸಂಸ್ಥೆಯು ವಿಶೇಷ ಗ್ರಂಥಾಲಯ, ಸ್ಟೋರಿ ಬುಕ್​ಗಳನ್ನು ಅಲ್ಲಿರಿಸಿದೆ ಎಂದು ಮೋದಿ ಹೇಳಿದರು.

ತ್ಯಾಜ್ಯ ನಿರ್ವಹಣೆಗಾಗಿ ಆರಂಭಿಸಲಾದ ಆವಿಷ್ಕಾರಗಳನ್ನು ಪ್ರಧಾನಿ ಶ್ಲಾಘಿಸಿದರು ಮತ್ತು ಮುಂಬೈನ ಇಬ್ಬರು ಹುಡುಗಿಯರು ಕ್ಲಿಪ್ಪಿಂಗ್‌ಗಳಿಂದ ಫ್ಯಾಶನ್ ಬಟ್ಟೆಗಳನ್ನು ತಯಾರಿಸುತ್ತಿದ್ದಾರೆ ಎಂದು ಪ್ರಸ್ತಾಪಿಸಿದರು. ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಇಂತಹ ಅನೇಕ ಎನ್‌ಜಿಒಗಳು ಮತ್ತು ಸಾಮಾಜಿಕ ಗುಂಪುಗಳನ್ನು ಪ್ರಧಾನಿ ಪ್ರಸ್ತಾಪಿಸಿದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!