ಹೊಸದಿಗಂತ ಡಿಜಿಟಲ್ ಡೆಸ್ಕ್:
ಯೂಟ್ಯೂಬರ್ ಶರ್ಮಿಷ್ಠಾ ಪನೋಲಿ ಬಂಧನ ರಾಜಕೀಯ ವಿವಾದಕ್ಕೆ ಕಾರಣವಾದ್ದು, ಈಗಾಗಲೇ ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಪಶ್ಚಿಮ ಬಂಗಾಲ ಸರಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೀಗ ಬಾಲಿವುಡ್ ನಟಿ, ಸಂಸದೆ ಕಂಗನಾ ರನೌತ್ ಹಾಗೂ ಹಲವರು ಶರ್ಮಿಷ್ಠಾ ಪಲೋನಿಯನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿದ್ದಾರೆ.
22 ವರ್ಷ ವಯಸ್ಸಿನ ಯೂಟ್ಯೂಬರ್ ಮತ್ತು ಕಾನೂನು ಪದವಿ ವಿದ್ಯಾರ್ಥಿನಿ ಶರ್ಮಿಷ್ಠಾ ಪನೋಲಿ ಅನ್ನು ಪಶ್ಚಿಮ ಬಂಗಾಳ ಪೊಲೀಸರು ಕೋಮುಸೌಹಾರ್ದ ಧಕ್ಕೆ ತಂದ ಆರೋಪದಲ್ಲಿ ಬಂಧಿಸಿದ್ದಾರೆ.
ಶರ್ಮಿಷ್ಠಾ ಪನೋಲಿ ಕಳೆದ ತಿಂಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಸಂದೇಶದಲ್ಲಿ ‘ಆಪರೇಷನ್ ಸಿಂದೂರ’ದ ಬಗ್ಗೆ ಬಾಲಿವುಡ್ ಸೆಲೆಬ್ರಿಟಿಗಳ ಮೌನವನ್ನು ಪ್ರಶ್ನಿಸಿ ಖಾರವಾದ ಸಂದೇಶಗಳನ್ನು ಹಂಚಿಕೊಂಡಿದ್ದರು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾದ ಬಳಿಕ ವಿಡಿಯೋ ಹಾಗೂ ಕಮೆಂಟ್ಗಳನ್ನು ಡಿಲೀಟ್ ಮಾಡಿದ್ದ ಶರ್ಮಿಷ್ಠಾ ಪನೋಲಿ, ಬಳಿಕ ಸಾರ್ವಜನಿಕವಾಗಿ ಕ್ಷಮೆ ಕೇಳುತ್ತಿರುವುದಾಗಿ ಪೋಸ್ಟ್ ಸಹ ಹಂಚಿಕೊಂಡಿದ್ದರು.
ಆದರೆ ಸಾಮಾಜಿಕ ಜಾಲತಾಣದಲ್ಲಿ ಶರ್ಮಿಷ್ಠಾ ಬಂಧನಕ್ಕೆ ಒತ್ತಡ ಬಂದು ಬಳಿಕ ಇದೀಗ ಪೊಲೀಸರು ಶರ್ಮಿಷ್ಠಾ ವಿರುದ್ಧ ಕೋಮು ಸೌಹಾರ್ದ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಶರ್ಮಿಷ್ಠಾ ಬಂಧನಕ್ಕೆ ಬಿಜೆಪಿ ಸಂಸದರು, ಮಿತ್ರ ಪಕ್ಷಗಳ ಮುಖಂಡರಿಂದ ವಿರೋಧ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ‘ಆಲ್ ಐಸ್ ಆನ್ ಶರ್ಮಿಷ್ಠಾ’ ಟ್ರೆಂಡ್ ಮಾಡಲಾಗುತ್ತಿದೆ. ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್, ಸಂಸದೆ, ನಟಿ ಕಂಗನಾ ಸಹ ಶರ್ಮಿಷ್ಠಾಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ನಟಿ ಕಂಗನಾ ರನೌತ್ ಸಹ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಕಾನೂನು ಸುವ್ಯವಸ್ಥೆ ಹೆಸರಲ್ಲಿ ಒಬ್ಬರನ್ನು ಹಿಂಸಿಸುವುದು ಅಪರಾಧ, ಪಶ್ಚಿಮ ಬಂಗಾಳವನ್ನು, ಉತ್ತರ ಕೊರಿಯಾ ದಂತೆ ಮಾಡಬಾರದು, ಆ ಯುವತಿ ಈಗಾಗಲೇ ಕ್ಷಮೆ ಕೇಳಿದ್ದಾಗಿದೆ, ಹಾಗಿದ್ದರೂ ಸಹ ಆಕೆಯನ್ನು ಬಂಧಿಸಿ, ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಆಕೆಯ ಕರಿಯರ್, ಆಕೆಯ ವ್ಯಕ್ತಿತ್ವದ ಮೇಲೆ ಮಸಿ ಬಳಿಯಲಾಗುತ್ತಿದೆ. ಆಕೆ ಸಾಮಾನ್ಯ ವಿಷಯವನ್ನೇ ಹೇಳಿದ್ದಾಳೆ, ಆಕೆ ಬಳಸಿರುವ ಭಾಷೆ ಇತ್ತೀಚೆಗಿನ ಯುವಕರಿಗೆ ಸಾಮಾನ್ಯ ಎನ್ನುವಂಥಹಾ ಭಾಷೆ, ಕೇವಲ ಬೈಗುಳ ಬಳಸಿದ ಮಾತ್ರಕ್ಕೆ ಬಂಧಿಸುವುದು ಸರಿಯಲ್ಲ, ಶರ್ಮಿಷ್ಠಾ ಅವರನ್ನು ಶೀಘ್ರವೇ ಬಿಡುಗಡೆ ಮಾಡಬೇಕು’ ಎಂದಿದ್ದಾರೆ.
‘ಶರ್ಮಿಷ್ಠಾ ತಮ್ಮ ತಪ್ಪು ಒಪ್ಪಿಕೊಂಡು ವಿಡಿಯೋಗಳನ್ನು ಡಿಲೀಟ್ ಮಾಡಿದ್ದಳು, ಕ್ಷಮೆಯನ್ನೂ ಕೇಳಿದ್ದರು, ಆದರೆ ಆ ಬಳಿಕ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ’ ಎಂದಿರುವ ಪವನ್ ಕಲ್ಯಾಣ್, ಮಮತಾ ಬ್ಯಾನರ್ಜಿಯ ವಿಡಿಯೋ ಹಂಚಿಕೊಂಡು, ‘ಮಮತಾ ಬ್ಯಾನರ್ಜಿ ಸನಾತನ ಧರ್ಮವನ್ನು ‘ಗಂಧಾ ಧರ್ಮ’ ಎಂದಾಗ ಏಕೆ ಬಂಧಿಸಲಿಲ್ಲ, ಕ್ಷಮೆ ಕೇಳಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.