ಪೊಲೀಸರ ಮೇಲೆ ಹಲ್ಲೆ ಆರೋಪ ಪ್ರಕರಣ: ವೈಎಸ್​ ಶರ್ಮಿಳಾಗೆ ಷರತ್ತು ಬದ್ಧ ಜಾಮೀನು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತೆಲಂಗಾಣ ಪೊಲೀಸರ ಮೇಲೆ ಹಲ್ಲೆ ಆರೋಪ ಪ್ರಕರಣದಲ್ಲಿ ಸೋಮವಾರ ಬಂಧಿತರಾಗಿದ್ದ ವೈಎಸ್​ಆರ್​ ತೆಲಂಗಾಣ ಪಕ್ಷದ ಅಧ್ಯಕ್ಷೆ ವೈಎಸ್​ ಶರ್ಮಿಳಾ ಅವರಿಗೆ ಹೈದರಾಬಾದ್​ನ ನಾಂಪಲ್ಲಿ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. 30 ಸಾವಿರ ರೂಪಾಯಿ ಸಮೇತ ಇಬ್ಬರ ಶ್ಯೂರಿಟಿ ಕೊಡಬೇಕು ಮತ್ತು ವಿದೇಶಕ್ಕೆ ತೆರಳುವ ವೇಳೆ ನ್ಯಾಯಾಲಯದ ಅನುಮತಿ ಪಡೆಯಬೇಕು ಎಂದು ಷರತ್ತು ವಿಧಿಸಲಾಗಿದೆ.

ತೆಲಂಗಾಣ ಲೋಕಸೇವಾ ಆಯೋಗ (ಟಿಎಸ್​ಪಿಎಸ್​ಸಿ) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಸೋಮವಾರ ವಿಶೇಷ ತನಿಖಾ ತಂಡ (ಎಸ್ಐಟಿ) ಕಚೇರಿಗೆ ಶರ್ಮಿಳಾ ತೆರಳಲು ನಿರ್ಧರಿಸಿದ್ದರು. ಈ ವೇಳೆ ಪೊಲೀಸರು ಶರ್ಮಿಳಾ ಅವರನ್ನು ತಡೆದಿದ್ದರು. ಆಗ ಪೊಲೀಸರೊಂದಿಗೆ ವಾಗ್ವಾದ ನಡೆದಿತ್ತು. ಆ ವೇಳೆ ತನ್ನನ್ನು ತಡೆಯಲು ಯತ್ನಿಸಿದ ಎಸ್‌ಐ, ಮಹಿಳಾ ಪೇದೆ ಮೇಲೆ ಶರ್ಮಿಳಾ ಕೈ ಮಾಡಿದ್ದರು. ಇದರಿಂದ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿತ್ತು.

ಈ ಬೆನ್ನಲ್ಲೇ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಶರ್ಮಿಳಾ ವಿರುದ್ಧ ಪೊಲೀಸರು ಜುಬಿಲಿ ಹಿಲ್ಸ್ ಠಾಣೆಗೆ ಕರೆದೊಯ್ದಿದ್ದರು. ಅಲ್ಲದೇ ಸೆಕ್ಷನ್ 353, 332, 509, 427 ಸೇರಿ ವಿವಿಧ ಸೆಕ್ಷನ್​ಗಳಡಿ ಪ್ರಕರಣ ದಾಖಲಿಸಿ, ನಾಂಪಲ್ಲಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು. ಈ ವೇಳೆ ನ್ಯಾಯಾಧೀಶರು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದರು. ಇದರಿಂದ ಶರ್ಮಿಳಾ ಅವರನ್ನು ಚಂಚಲಗುಡ ಜೈಲಿಗೆ ಶಿಫ್ಟ್​ ಮಾಡಲಾಗಿತ್ತು.

ಮತ್ತೊಂದೆಡೆ, ಶರ್ಮಿಳಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಷರತ್ತುಬದ್ಧ ಜಾಮೀನು ನೀಡಿದೆ. ಇನ್ನೊಂದೆಡೆ ಇಂದು ಬೆಳಗ್ಗೆ ಚಂಚಲಗೂಡ ಜೈಲಿನಲ್ಲಿರುವ ಶರ್ಮಿಳಾ ಅವರನ್ನು ಭೇಟಿ ಮಾಡಲು ತಾಯಿ ವೈ.ಎಸ್.ವಿಜಯಮ್ಮ ಅಲ್ಲಿಗೆ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, ಮುಖ್ಯಮಂತ್ರಿ ಚಂದ್ರಶೇಖರ್​ ರಾವ್​ ಶರ್ಮಿಳಾ ಧ್ವನಿಯನ್ನು ಹತ್ತಿಕ್ಕಲು ಯತ್ನಿಸುತ್ತಿದ್ದಾರೆ. ಆದರೆ ನ್ಯಾಯಾಲಯದಲ್ಲಿ ಶರ್ಮಿಳಾ ಅವರಿಗೆ ಜಾಮೀನು ಸಿಗುವ ವಿಶ್ವಾಸವಿದೆ. ಜಾಮೀನು ಸಿಕ್ಕ ನಂತರವೂ ಹೋರಾಟ ಮುಂದುವರಿಸುವುದಾಗಿ ಶರ್ಮಿಳಾ ಹೇಳಿದ್ದಾರೆ ಎಂದು ಮಾಹಿತಿ ನೀಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!