ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………
ಹೊಸದಿಗಂತ ವರದಿ, ಚಿಕ್ಕಮಗಳೂರು:
ನಗರದ ಐಜಿ ರಸ್ತೆಯಲ್ಲಿರುವ ಝಬೇರ್ ಕ್ಲಿನಿಕ್ ಸೋಮವಾರ ರೋಗಿಗಳಿಂದ ತುಂಬಿ ಕುರಿದೊಡ್ಡಿಯಂತಾಗಿತ್ತು.
ಯಾವುದೇ ಅಂತರ ಕಾಪಾಡದೆ ಸಣ್ಣ ಕೊಠಡಿಯಲ್ಲಿ 50 ಕ್ಕೂ ಹೆಚ್ಚು ರೋಗಿಗಗಳು ಚಿಕಿತ್ಸೆಗಾಗಿ ಸರತಿಯಲ್ಲಿ ಕಾದುಕುಳಿತಿದ್ದರು. ಇನ್ನೂ ಕೆಲವರು ಕುಳಿತುಕೊಳ್ಳಲೂ ಜಾಗವಿಲ್ಲದೆ ಒಟ್ಟೊಟ್ಟಿಗೆ ನಿಂತುಕೊಂಡಿದ್ದರು.
ಚಿಕಿತ್ಸೆಗೆಂದು ಬಂದ ಪ್ರಜ್ಞಾವಂತ ರೋಗಿಯೊಬ್ಬರು ಈ ವಿಚಾರವನ್ನು ಹೊರಗಡೆ ಕರ್ತವ್ಯದಲ್ಲಿದ್ದ ಪೊಲೀಸರ ಗಮನಕ್ಕೆ ತಂದರು ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಯಾವುದೇ ನಿಯಮ ಪಾಲಿಸದೆ ರೋಗಿಗಳನ್ನು ಒಂದೇ ಕೊಠಡಿಯಲ್ಲಿ ಕೂರಿಸಿಕೊಂಡಿರುವ ಬಗ್ಗೆ ಆಸ್ಪತ್ರೆ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡು ಎಲ್ಲರನ್ನೂ ಹೊರಕ್ಕೆ ಕಳಿಸಿದರು. ಅಂತರ ಕಾಪಾಡಿಕೊಂಡು ಒಬ್ಬರಾದ ನಂತರ ಒಬ್ಬರು ಒಳಕ್ಕೆ ತೆರಳಿ ಚಿಕಿತ್ಸೆ ಪಡೆಯುವಂತೆ ಸಲಹೆ ಮಾಡಿದರು.
ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್ಗಳು ಲಾಕ್ಡೌನ್ನಿಂದ ಹೊರತಾಗಿರುತ್ತವೆ ಆದರೆ ಇತರೆ ಸುರಕ್ಷಾ ಕ್ರಮಗಳನ್ನು, ಕೋವಿಡ್ ನಿಯಂತ್ರಣ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇ ಬೇಕಾಗುತ್ತದೆ. ಅಂತರ ಕಾಪಾಡಿಕೊಂಡು ಒಬ್ಬರನ್ನೇ ಕರೆದು ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿದರೆ ಎಲ್ಲರಿಗೂ ಒಳಿತು ಎಂದು ಹಲವರು ಅಭಿಪ್ರಾಯಿಸಿದರು.