Friday, August 29, 2025

ಗಣೇಶನ ಹಬ್ಬದ ದಿನದಂದು ಈ ತಪ್ಪುಗಳನ್ನು ಮಾತ್ರ ಮಾಡಬೇಡಿ..

ದೇಶಾದ್ಯಂತ ಸಂಭ್ರಮದ ಗಣೇಶ ಚತುರ್ಥಿ ಆಚರಣೆ ಮಾಡಲಾಗುತ್ತಿದೆ.ಹಬ್ಬದ ಈ ದಿನದಂದು ಕೆಲವೊಂದು ತಪ್ಪುಗಳನ್ನು ಮಾಡಬೇಡಿ. ಯಾವ ತಪ್ಪು? ಇಲ್ಲಿದೆ ಮಾಹಿತಿ..

ಮೊದಲನೆಯದಾಗಿ, ಗಣೇಶ ಚತುರ್ಥಿಯ ರಾತ್ರಿ ಚಂದ್ರನನ್ನು ನೋಡುವುದನ್ನು ನಿಷೇಧಿಸಲಾಗಿದೆ. ಜನಶ್ರುತಿಯ ಪ್ರಕಾರ, ಆ ದಿನ ಚಂದ್ರನನ್ನು ನೋಡುವುದರಿಂದ ಸುಳ್ಳು ಆರೋಪಗಳು ಅಥವಾ ಅಶುಭ ಫಲಗಳನ್ನು ಅನುಭವಿಸಬೇಕಾಗುತ್ತದೆ ಎಂದು ನಂಬಲಾಗಿದೆ. ಆದ್ದರಿಂದ ಆ ದಿನದಂದು ಚಂದ್ರನನ್ನು ನೇರವಾಗಿ ನೋಡುವುದನ್ನು ತಪ್ಪಿಸಬೇಕು.

ಗಣೇಶ ಪೂಜೆಯ ವೇಳೆ ತುಳಸಿ ಎಲೆಗಳನ್ನು ಬಳಸಬಾರದು. ದಂತಕಥೆಯ ಪ್ರಕಾರ, ತುಳಸಿ ದೇವಿ ಗಣೇಶನನ್ನು ವಿವಾಹವಾಗಲು ಬಯಸಿದಾಗ ಗಣೇಶನು ನಿರಾಕರಿಸಿದ್ದರಿಂದ ಅವಳಿಗೆ ಶಾಪ ನೀಡಿದನೆಂದು ಹೇಳಲಾಗಿದೆ. ಆದ್ದರಿಂದ ತುಳಸಿಯನ್ನು ಗಣೇಶನ ಆರಾಧನೆಯಲ್ಲಿ ಬಳಸುವುದು ನಿಷೇಧ.

ಪೂಜೆಯ ವೇಳೆ ಕಪ್ಪು ಅಥವಾ ನೀಲಿ ಬಣ್ಣದ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಬೇಕು. ಬದಲಿಗೆ ಕೆಂಪು ಮತ್ತು ಹಳದಿ ಬಣ್ಣಗಳ ಬಟ್ಟೆಗಳನ್ನು ಧರಿಸುವುದು ಅತ್ಯಂತ ಶುಭಕರ. ಪೂಜಾ ಸ್ಥಳದಲ್ಲಿ ಶೂ ಅಥವಾ ಚಪ್ಪಲಿಗಳನ್ನು ಧರಿಸಬಾರದು.

ಪ್ರತೀ ವರ್ಷ ಹೊಸ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು. ಹಳೆಯ ಮೂರ್ತಿಯನ್ನು ನೀರಿನಲ್ಲಿ ಸಂಪೂರ್ಣವಾಗಿ ಕರಗಿಸಬೇಕು. ಜೊತೆಗೆ ಒಂದೇ ಮನೆಯಲ್ಲೇ ಒಂದೇ ಸಮಯದಲ್ಲಿ ಎರಡು ಗಣೇಶ ಮೂರ್ತಿಗಳನ್ನು ಇರಿಸಬಾರದು. ರಾಸಾಯನಿಕಗಳಿಂದ ತಯಾರಾದ ಮೂರ್ತಿಗಳನ್ನು ತಪ್ಪಿಸಿ, ಮಣ್ಣಿನಿಂದ ಮಾಡಿದ ಪರಿಸರ ಸ್ನೇಹಿ ವಿಗ್ರಹವನ್ನು ಆರಿಸುವುದು ಉತ್ತಮ.

 ಗಣೇಶನ ಮೂರ್ತಿಯನ್ನು ನೇರವಾಗಿ ನೆಲದ ಮೇಲೆ ಇಡಬಾರದು. ಮೂರ್ತಿಯನ್ನು ಮರದ ಹಲಗೆ ಅಥವಾ ಪೀಠದ ಮೇಲೆ ಇಟ್ಟು ಅದರ ಮೇಲೆ ಕೆಂಪು ಅಥವಾ ಹಳದಿ ಬಟ್ಟೆಯನ್ನು ಹರಡಬೇಕು. ಮೂರ್ತಿಯನ್ನು ಸ್ನಾನಗೃಹ ಅಥವಾ ಕಸ ಹಾಕುವ ಸ್ಥಳದ ಬಳಿ ಇರಿಸಬಾರದು. ಪ್ರತಿಷ್ಠಾಪನೆಯ ದಿನಗಳಲ್ಲಿ ಮಾಂಸಾಹಾರ, ಮದ್ಯಪಾನ, ಈರುಳ್ಳಿ, ಬೆಳ್ಳುಳ್ಳಿ ಮುಂತಾದವುಗಳನ್ನು ಸೇವಿಸುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು.

ಗಣೇಶ ಮೂರ್ತಿಯನ್ನು ವಿಸರ್ಜಿಸುವಾಗ ಜಾಗ್ರತೆ ವಹಿಸಬೇಕು. ಮೂರ್ತಿಯನ್ನು ಸಮುದ್ರ ಅಥವಾ ನದಿಗೆ ಎಸೆದುಬಿಡಬಾರದು. ಬದಲಾಗಿ ಭಕ್ತಿಯಿಂದ ನೀರಿನಲ್ಲಿ ನಿಧಾನವಾಗಿ ಮುಳುಗಿಸಬೇಕು ಮತ್ತು “ಗಣಪತಿ ಬಪ್ಪಾ ಮೋರ್ಯ” ಎಂಬ ಜಪ ಮಾಡಬೇಕು. ಜೊತೆಗೆ ವಿಗ್ರಹವನ್ನು ಒಡೆಯುವುದು ಅಥವಾ ಹಾನಿಗೊಳಿಸುವುದು ನಿಷಿದ್ಧ. ವಿಸರ್ಜನೆಯ ಮೊದಲು ಮನೆಯಲ್ಲಿ ಅಂತಿಮ ಆರತಿ ಮಾಡಿ ಗಣೇಶನಿಗೆ ನೆಚ್ಚಿನ ಆಹಾರವನ್ನು ಸಮರ್ಪಿಸಬೇಕು.

ಇನ್ನು ಬಹುಮುಖ್ಯವಾಗಿ ಸಾರ್ವಜನಿಕ ನೀರಿನ ಮೂಲವಿಲ್ಲದಿದ್ದರೆ ಮನೆಯಲ್ಲಿ ದೊಡ್ಡ ಬಕೆಟ್ ಅಥವಾ ಟ್ಯಾಂಕ್‌ನಲ್ಲಿ ನೀರನ್ನು ತುಂಬಿಸಿ ಅದರಲ್ಲೇ ವಿಸರ್ಜನೆ ಮಾಡಬಹುದು. ಇದು ಪರಿಸರ ಸ್ನೇಹಿ ವಿಧಾನವಾಗಿದೆ. ಮೂರ್ತಿಯನ್ನು ಕರಗಿಸಿದ ನಂತರ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಬೇಕು. ಹೂವು, ಹೂಮಾಲೆ, ಪೂಜಾ ವಸ್ತುಗಳನ್ನು ನದಿಯಲ್ಲಿ ಅಥವಾ ಸರೋವರದಲ್ಲಿ ಎಸೆಯಬಾರದು.

ಇದನ್ನೂ ಓದಿ