Saturday, December 13, 2025

ರಾಯಚೂರಿನಲ್ಲಿ ದಾಖಲೆ ಬ್ರೇಕ್ ಮಾಡಿದ ಚಳಿ: ಬಿಸಿಲನಾಡಿಗೆ ‘ಶೀತಲ ಗಾಳಿ’ಯ ಹೊಡೆತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಸಿಲುನಾಡು ಎಂದೇ ಖ್ಯಾತವಾಗಿರುವ ರಾಯಚೂರು ಜಿಲ್ಲೆ ಇದೀಗ ದಾಖಲೆ ಮಟ್ಟದ ಶೀತಕ್ಕೆ ತತ್ತರಿಸಿದೆ. ಈ ಬಾರಿ ಜಿಲ್ಲೆಯಲ್ಲಿ 9 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ಉಷ್ಣಾಂಶ ದಾಖಲಾಗಿದ್ದು, ತಂಪು ಗಾಳಿಗೆ ಜನತೆ ಥಂಡಾ ಹೊಡೆದಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಚಳಿಯ ಪ್ರಮಾಣ ತೀವ್ರವಾಗಿ ಹೆಚ್ಚಾಗಿದ್ದು, ಮುಂದಿನ ಐದು ದಿನಗಳ ಕಾಲವೂ ಈ ಚಳಿಯ ಅಬ್ಬರ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ರಾಯಚೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಹಗುರ ಮಳೆಯಾಗುವ ಸಾಧ್ಯತೆಯೂ ಇದೆ.

ಗರಿಷ್ಠ ಉಷ್ಣಾಂಶ: 28 ರಿಂದ 29 ಡಿಗ್ರಿ ಸೆಲ್ಸಿಯಸ್

ಕನಿಷ್ಠ ಉಷ್ಣಾಂಶ: 10 ರಿಂದ 7 ಡಿಗ್ರಿ ಸೆಲ್ಸಿಯಸ್‌ಗೆ ಕುಸಿಯುವ ಸಾಧ್ಯತೆ

ತೀವ್ರ ಚಳಿಯಿಂದಾಗಿ ರೈತರ ಕೃಷಿ ಚಟುವಟಿಕೆಗಳ ಮೇಲೂ ನೇರ ಪರಿಣಾಮ ಬೀರುತ್ತಿದೆ. ತಾಪಮಾನ ಇಳಿಕೆಯಿಂದಾಗಿ ಬೆಳೆಗಳಲ್ಲಿ ಪೋಷಕಾಂಶಗಳ ಕೊರತೆ ಉಂಟಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ, ರಾಯಚೂರು ಕೃಷಿ ವಿವಿ ಅಧಿಕಾರಿಗಳು ರೈತರಿಗೆ ತಕ್ಷಣವೇ ಬೆಳೆಗಳಿಗೆ ಪೋಷಕಾಂಶಗಳ ಸಿಂಪಡಣೆ ಮಾಡುವಂತೆ ಸಲಹೆ ನೀಡಿದ್ದಾರೆ.

ಚಳಿಯ ವಾತಾವರಣವು ಸಾರ್ವಜನಿಕರ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಹೃದಯಾಘಾತ ಮತ್ತು ರಕ್ತದೊತ್ತಡದಂತಹ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ತೀವ್ರ ಚಳಿಯ ಹೊಡೆತದಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕರು ಬೆಂಕಿ ಹಾಕಿ ಚಳಿ ಕಾಯಿಸಿಕೊಳ್ಳುತ್ತಿರುವ ದೃಶ್ಯಗಳು ಅಲ್ಲಲ್ಲಿ ಕಂಡುಬರುತ್ತಿವೆ. ಅಲ್ಲದೆ, ಉದ್ಯಾನವನ ಮತ್ತು ಕ್ರೀಡಾಂಗಣಗಳು ವಾಕಿಂಗ್ ಬರುವ ಜನರಿಲ್ಲದೆ ಬಿಕೋ ಎನ್ನುತ್ತಿವೆ.

error: Content is protected !!