Thursday, December 18, 2025

140 ಶಾಸಕರು ನಮ್ಮೊಂದಿಗಿದ್ದಾರೆ, 2028ರಲ್ಲೂ ನಾವೇ ಅಧಿಕಾರಕ್ಕೆ: ವಿಪಕ್ಷಕ್ಕೆ ಸಿದ್ದು ಸವಾಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ಪಕ್ಷದ ಶಾಸಕರು ಸುಭದ್ರವಾಗಿದ್ದು, 2028ರ ವಿಧಾನಸಭಾ ಚುನಾವಣೆಯಲ್ಲೂ ಜನಾದೇಶದೊಂದಿಗೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಸದಾ ವಿರೋಧಪಕ್ಷದ ಸ್ಥಾನದಲ್ಲೇ ಇರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಶುಕ್ರವಾರ (ಡಿ. 16) ವಿಧಾನಸಭಾ ಕಲಾಪದಲ್ಲಿ ವಿರೋಧ ಪಕ್ಷದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಮಾತನಾಡಿದ ಮುಖ್ಯಮಂತ್ರಿ, ‘ಉರಿಯುವುದರ ಮೇಲೆ ಉಪ್ಪು ಹಾಕಬಾರದು ಎಂಬ ಗಾದೆಯಿದೆ. ಆದರೆ ವಿರೋಧಪಕ್ಷದವರು ಇರುವುದೇ ಉರಿಯುವುದರ ಮೇಲೆ ಉಪ್ಪು ಸುರಿಯಲು. ವಿರೋಧ ಪಕ್ಷದವರು ಎಷ್ಟೇ ಪ್ರಚೋದನೆ ಮಾಡಿದರೂ ನಮ್ಮ ಶಾಸಕರು ಪ್ರಚೋದಿತರಾಗುವುದಿಲ್ಲ. ಐದು ವರ್ಷ ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ಜನರು ಆಶೀರ್ವದಿಸಿದ್ದಾರೆ. ನಮ್ಮೊಂದಿಗೆ 140 ಶಾಸಕರು ಇದ್ದಾರೆ. ಇದರಲ್ಲಿ ವಿರೋಧಪಕ್ಷದವರು ಹುಳಿ ಹಿಂಡುವ ಅಗತ್ಯವಿಲ್ಲ’ ಎಂದು ವಿಪಕ್ಷದ ಪ್ರಯತ್ನವನ್ನು ತಳ್ಳಿಹಾಕಿದರು.

ಕಾಂಗ್ರೆಸ್‌ನ ಸರ್ಕಾರವು ಜನರ ನಾಡಿಮಿಡಿತವನ್ನು ಅರಿತಿದೆ. 2023ರಲ್ಲಿ ಆಶೀರ್ವಾದ ಮಾಡಿದಂತೆಯೇ 2028ರಲ್ಲಿಯೂ ಕಾಂಗ್ರೆಸ್ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬರಲಿದೆ. ಕರ್ನಾಟಕದ ಜನ ಬಿಜೆಪಿಯನ್ನು ಎಂದಿಗೂ ಅಧಿಕಾರಕ್ಕೆ ತರುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ಎರಡು ಬಾರಿ ಆಡಳಿತ ನಡೆಸಿದ್ದರೂ, ಒಂದು ಬಾರಿಯೂ ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿಲ್ಲ. 2008 ಮತ್ತು 2018ರಲ್ಲಿ ‘ಆಪರೇಷನ್ ಕಮಲ’ ನಡೆಸಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದಾರೆ. ರಾಜ್ಯದ ಜನ ಬಿಜೆಪಿಗೆ ಆಶೀರ್ವಾದ ಮಾಡುವುದಿಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ ಎಂದರು.

‘ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಮಾತು ಅಂತಿಮ. ಆದರೆ ಬಿಜೆಪಿಯಲ್ಲಿ ಅಧ್ಯಕ್ಷಗಿರಿ ಆಯ್ಕೆಯಲ್ಲಿ ಒಮ್ಮತ ಸಾಧಿಸಲಾಗಿಲ್ಲ. ಬಿಜೆಪಿಯವರಿಗೆ ನಮ್ಮ ಬಗ್ಗೆ ಅಸೂಯೆ ಕಾಡುತ್ತಿದೆ. ನಾವು ಐದು ವರ್ಷಗಳ ಸುಭದ್ರ ಸರ್ಕಾರವನ್ನು ನೀಡಲಿದ್ದೇವೆ. 2013, 2023ರಲ್ಲಿ ಕಾಂಗ್ರೆಸ್‌ಗೆ ಜನ ಆಶೀರ್ವದಿಸಿದ್ದಾರೆ. ಆದರೆ ಬಿಜೆಪಿಯವರಿಗೆ ಒಮ್ಮೆಯೂ ಜನಾದೇಶ ದೊರೆತಿಲ್ಲ, ಭವಿಷ್ಯದಲ್ಲಿಯೂ ದೊರೆಯುವುದಿಲ್ಲ. ಬಿಜೆಪಿಯವರು ಸದಾ ವಿರೋಧ ಪಕ್ಷದ ಸ್ಥಾನದಲ್ಲಿಯೇ ಇರುತ್ತಾರೆ’ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.

error: Content is protected !!