ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ರಾಜ್ಯದಲ್ಲಿ ಲಕ್ಷಾಂತರ ಸರ್ಕಾರಿ ಹುದ್ದೆಗಳು ಖಾಲಿಯಿದ್ದರೂ, “ದುಡ್ಡಿಲ್ಲ” ಎಂಬ ಕಾರಣ ನೀಡಿ ಭರ್ತಿ ಮಾಡದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ವಿವಿಧ ಇಲಾಖೆಗಳಲ್ಲಿ ಸುಮಾರು 2 ಲಕ್ಷ ಹುದ್ದೆಗಳು ಖಾಲಿ ಇವೆ. ಆದರೆ, ಎರಡೂವರೆ ವರ್ಷಗಳ ಆಡಳಿತ ಕಳೆದರೂ ಸರ್ಕಾರ ಕೇವಲ ವಿಳಂಬದ ಕಾರಣಗಳನ್ನೇ ಹೇಳುತ್ತಿದೆ ಎಂದು ದೂರಿದರು.
“ರಾಜ್ಯ ಸರ್ಕಾರವು ದುಡ್ಡಿಲ್ಲ ಎಂಬ ನೆಪ ಹೇಳಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ. ಅವರು ಎರಡೂವರೆ ವರ್ಷಗಳಿಂದಲೂ ಬರೀ ಕಾರಣಗಳನ್ನೇ ಹೇಳಿಕೊಂಡು ಬಂದಿದ್ದಾರೆ,” ಎಂದು ಜೋಶಿ ಟೀಕಿಸಿದರು.
ಇದಕ್ಕೆ ವ್ಯತಿರಿಕ್ತವಾಗಿ, ಕೇಂದ್ರ ಸರ್ಕಾರವು ಕಳೆದ ಐದಾರು ವರ್ಷಗಳಿಂದಲೂ ನಿರಂತರವಾಗಿ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ ಎಂದು ಅವರು ಉದಾಹರಿಸಿದರು. ರಾಜ್ಯ ಸರ್ಕಾರವು ಹಣಕಾಸಿನ ನೆಪ ಹೇಳಿ ಉದ್ಯೋಗಾಕಾಂಕ್ಷಿಗಳಿಗೆ ಅನ್ಯಾಯ ಮಾಡುತ್ತಿದೆ ಎಂಬುದು ಜೋಶಿ ಅವರ ವಾಗ್ದಾಳಿಯಾಗಿದೆ.

