ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಲ್ಲಾ ಪಂದ್ಯಗಳು ಹೊರ ರಾಜ್ಯಕ್ಕೆ ಶಿಫ್ಟ್ ಆಗಲಿವೆ ಎಂಬ ಚರ್ಚೆಗಳು ಜೋರಾಗಿದ್ದ ನಡುವೆಯೇ, ಆರ್‌ಸಿಬಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. 2026ರ ಐಪಿಎಲ್‌ನಲ್ಲಿ ಆರ್‌ಸಿಬಿಯ ಎಲ್ಲಾ ಪಂದ್ಯಗಳು ಬೆಂಗಳೂರಿನಲ್ಲೇ ನಡೆಯಲಿವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಪಷ್ಟ ಘೋಷಣೆ ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ಕ್ರಿಕೆಟ್‌ಗೆ ಹೆಮ್ಮೆ; ಆರ್‌ಸಿಬಿ ನಮ್ಮ ಹೃದಯಕ್ಕೆ ಹತ್ತಿರ ಎಂದು ಹೇಳಿದರು. ಯಾವುದೇ ಕಾರಣಕ್ಕೂ ಐಪಿಎಲ್ ಕೈ ತಪ್ಪಲು ಬಿಡುವುದಿಲ್ಲ. ಕಾನೂನು ಮತ್ತು ಸುರಕ್ಷತಾ ಚೌಕಟ್ಟಿನೊಳಗೆ ಎಲ್ಲಾ ವ್ಯವಸ್ಥೆಗಳನ್ನು ಸರಿಪಡಿಸಿ ಬೆಂಗಳೂರಿನಲ್ಲೇ ಪಂದ್ಯಗಳು ನಡೆಯುವಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ನಡೆದ ಕಾಲ್ತುಳಿತ ದುರಂತದ ನಂತರ, ಟೂರ್ನಿಯನ್ನು ಪುಣೆಗೆ ಸ್ಥಳಾಂತರಿಸುವ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂಬ ವರದಿಗಳು ಹರಿದಾಡುತ್ತಿವೆ. ಆದರೆ ಇದಕ್ಕೆ ಕೊನೆ ನೀಡುವಂತೆ ಡಿಕೆ ಶಿವಕುಮಾರ್, ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರೌಡ್ ಮ್ಯಾನೇಜ್‌ಮೆಂಟ್‌ಗೆ ವಿಶೇಷ ವ್ಯವಸ್ಥೆ ಮಾಡಲಾಗುವುದು. ಅಗತ್ಯವಿದ್ದರೆ ಪರ್ಯಾಯ ದೊಡ್ಡ ಕ್ರೀಡಾಂಗಣ ನಿರ್ಮಾಣಕ್ಕೂ ಸರ್ಕಾರ ತೆರೆದ ಮನಸ್ಸು ಹೊಂದಿದೆ ಎಂದು ಹೇಳಿದ್ದಾರೆ.
ನಗರದ ಗೌರವ ಹಾಗೂ ಕ್ರೀಡಾ ಪರಂಪರೆಯನ್ನು ಕಾಪಾಡಿಕೊಳ್ಳುವುದು ನಮ್ಮ ಹೊಣೆ. ಆರ್‌ಸಿಬಿ ಬೆಂಗಳೂರಿನದ್ದೇ, ಮುಂದೂ ಇಲ್ಲಿಯೇ ಇರಲಿದೆ ಎಂದು ಡಿಕೆ ಶಿವಕುಮಾರ್ ಪುನರುಚ್ಚರಿಸಿದ್ದಾರೆ. ಈ ಹೇಳಿಕೆಯಿಂದ, ಐಪಿಎಲ್ ಭವಿಷ್ಯದ ಬಗ್ಗೆ ಉಂಟಾಗಿದ್ದ ಆತಂಕಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಂತಾಗಿದೆ.

