ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗಾಂಜಾ ದಂಧೆ ಎಗ್ಗಿಲ್ಲದೆ ಮುಂದುವರಿದಿದೆ. ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ವಾಹನ ತಪಾಸಣೆ ವೇಳೆ ಪೊಲೀಸರು ಕಾರಿನಿಂದ 21 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ನಾಯಂಡಳ್ಳಿಯಿಂದ ಅನುಮಾನಾಸ್ಪದವಾಗಿ ಬರುತ್ತಿದ್ದ ಕಾರನ್ನು ತಡೆದ ಪೊಲೀಸರು, ಪರಿಶೀಲನೆಗೆ ಮುಂದಾಗಿದ್ದಾರೆ. ಕಾರಿನಲ್ಲಿ ಡ್ರೈವರ್ ಸೇರಿ ಮೂವರು ಪ್ರಯಾಣಿಸುತ್ತಿದ್ದರು. ಪೊಲೀಸರು ವಾಹನ ನಿಲ್ಲಿಸುತ್ತಿದ್ದಂತೆ ಭಯಭೀತರಾದ ಇಬ್ಬರು ಪೆಡ್ಲರ್ ಗಳು ಕಾರಿನ ಚಾಲಕನನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಬಳಿಕ ಕಾರು ಚಾಲಕನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಮಂಗಳವಾರ ಸಂಜೆ ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ವೀರಭದ್ರ ರಸ್ತೆಯ ಬಳಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬನಶಂಕರಿ ಸಂಚಾರ ಪೊಲೀಸರು ಟಿಂಟೆಡ್ ಗ್ಲಾಸ್ ಕಾರನ್ನು ಗಮನಿಸಿದ್ದಾರೆ. ಕಾರಿನ ಚಾಲಕ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ವಾಹನವನ್ನು ನಿಲ್ಲಿಸಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ಇಬ್ಬರು ಸ್ಥಳದಿಂದ ಓಡಿ ಹೋದರು. ಅನುಮಾನ ಹೆಚ್ಚಾದ ಬಳಿಕ ಕಾರನ್ನು ಪರಿಶೀಲನೆ ನಡೆಸಿದರೆ 21 ಕೆಜಿ ಗಾಂಜಾ ಹೊಂದಿದ್ದ 2 ಚೀಲಗಳು ಪತ್ತೆಯಾಯಿತು. ಇದರ ಮೌಲ್ಯ 80 ಲಕ್ಷ ರೂ. ಆಗಿದೆ. ಬಳಿಕ ಕಾರಿನ ಚಾಲಕನನ್ನು ವಶಕ್ಕೆ ಪಡೆಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.