ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣದಲ್ಲಿ ಓರ್ವ ಯುವಕ ತನ್ನದೇ ಸಾಕು ನಾಯಿಯ ಉಗುರು ಚುಚ್ಚಿ ಮೃತಪಟ್ಟಿದ್ದಾರೆ. ಈ ಸಾವು ಇಡೀ ದೇಶದಲ್ಲೇ ಭಾರೀ ಸಂಚಲವನ್ನು ಉಂಟು ಮಾಡಿದೆ.
ಭದ್ರಾದ್ರಿ ಕೊತ್ತಗೂಡೆಂ ಜಿಲ್ಲೆಯ ಎಡೂರ್ಲಬಯ್ಯಾರಾನಿ ಎಂಬ ಗ್ರಾಮದ ನಿವಾಸಿಯಾದ 25 ವರ್ಷ ಸಂದೀಪ್, ಸಾಕು ನಾಯಿಯ ಉಗುರು ಚುಚ್ಚಿಕೊಂಡ ಕಾರಣದಿಂದ ರೇಬೀಸ್ ಸೋಂಕು ಉಂಟಾಗಿ ಸಾವನ್ನಪ್ಪಿದ್ದಾರೆ.
ಎರಡು ತಿಂಗಳ ಹಿಂದಷ್ಟೇ ಸಂದೀಪ್ ಒಂದು ನಾಯಿ ಮರಿಯನ್ನು ಮನೆಗೆ ತಂದಿದ್ದರು. ಚಿಕ್ಕ ಮರಿಯಾದ ಕಾರಣ ಮನೆ ಎಲ್ಲಾ ಸದಸ್ಯರು ಕೂಡ ಅದನ್ನು ಮುದ್ದಾಡಿ ನೋಡಿಕೊಳ್ಳುತ್ತಿದ್ದರು. ಅದರಲ್ಲೂ ಸಂದೀಪ್ ಆದ ಲಾಲನೆ ಪಾಲನೆಯನ್ನು ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಂಡಿದ್ದರು. ಆದರೆ ಒಮ್ಮೆ ಸಂದೀಪ್ ತಂದೆಗೆ ನಾಯಿ ಮರಿ ಕಚ್ಚಿದ್ದು, ನಾಯಿ ಮರಿಯನ್ನು ಅವರಿಂದ ದೂರ ಎಳೆದುಕೊಳ್ಳುವ ಬರದಲ್ಲಿ ಸಂದೀಪ್‌ಗೆ ನಾಯಿಯ ಉರುಗು ಚುಚ್ಚಿ ಗಾಯವಾಗಿತ್ತು. ಆ ಬಳಿಕ ಸಂದೀಪ್ ತಂದೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಕೊಂಡಿದ್ದರು. ಆದರೆ ಸಂದೀಪ್ ಮಾತ್ರ ತನಗಾದ ಗಾಯದ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಚಿಕ್ಕ ಗಾಯ ತಾನೇ, ಬೇಗ ವಾಸಿಯಾಗುತ್ತದೆ ಎಂದು ನಿರ್ಲಕ್ಷ್ಯ ಮಾಡಿದ್ದರು.
ಆದರೆ, ಕೆಲವು ದಿನಗಳಾದ ಬಳಿಕ ಆತನ ಮಾನಸಿಕ ಆರೋಗ್ಯದಲ್ಲಿ ಬದಲಾವಣೆ ಆಗಿತ್ತು. ಮೊದಲು ತಲೆ ನೋವು, ಜ್ವರ, ನಿಶಕ್ತಿ ಕಾಣಿಸಿಕೊಂಡಿತ್ತು. ಆ ಬಳಿಕ ನೀರು ಕಂಡರೆ ಭಯ ಆಗೋದು (ಹೈಡ್ರೋಫೋಬಿಯಾ), ಆಹಾರ ನುಂಗುವ ಸಂದರ್ಭದಲ್ಲಿ ಸಮಸ್ಯೆ, ಟೆನ್ಶನ್ ನಂತಹ ಲಕ್ಷಣಗಳು ಕಾಣಿಸಿಕೊಂಡಿತ್ತು.
ಆ ವೇಳೆ ಕುಟುಂಬ ಸದಸ್ಯರು ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಈ ವೇಳೆ ಪರೀಕ್ಷೆ ನಡೆಸಿದ ವೈದ್ಯರು, ಸಂದೀಪ್ ಗೆ ರೇಬೀಸ್ ಸೋಂಕು ಉಂಟಾಗಿರೋದನ್ನು ಖಚಿತಪಡಿಸಿದ್ದರು. ಆದರೆ ಆ ವೇಳೆಗೆ ಪರಿಸ್ಥಿತಿ ಕೈಮೀರಿದ್ದು, ಬೇಗ ಚಿಕಿತ್ಸೆ ಕೊಡಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದು ವೈದ್ಯರು ಹೇಳಿದ್ದರಂತೆ.