ಹೊಸ ದಿಗಂತ ವರದಿ,ಚಿತ್ರದುರ್ಗ
ಕಾಂಗ್ರೆಸ್ ಹೈಕಮಾಂಡ್ ಗೆ ಕರ್ನಾಟಕ ಸರ್ಕಾರ ಎಟಿಎಂ ಸರ್ಕಾರವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಹಾರ ಚುನಾವಣೆಗೆ ೩೦೦ ಕೋಟಿ ರೂ. ಸಂಗ್ರಹ ಮಾಡಿದ್ದಾರೆ ಎಂದು ಮಾಜಿ ಸಚಿವ ಬಿಜೆಪಿ ಮುಖಂಡರಾದ ಶ್ರೀರಾಮುಲು ಆರೋಪಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿದೆ. ಕುರ್ಚಿ ಹಿಡಿಯಲು ಹಲವಾರು ಜನ ಟವಲ್ ಹಾಕಿ ಕಾಯುತ್ತಿದ್ದಾರೆ. ತಮ್ಮ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷದ ಹೈಕಮಾಂಡಿಗೆ ೩೦೦ ಕೋಟಿ ರೂ.ಗಳ ಕಪ್ಪ ನೀಡಲು ಮಂದಾಗಿದ್ದಾರೆ. ಸಚಿವರಿಂದ ಹಣ ವಸೂಲಿ ಮಾಡಲಾಗಿದೆ ಎಂದು ದೂರಿದರು.
ನ.೧೫ ರಂದು ಮುಖ್ಯಮಂತ್ರಿಗಳು ದೆಹಲಿ ಪ್ರವಾಸ ಮಾಡಲಿದ್ದಾರೆ. ಪಕ್ಷದ ಹೈಕಮಾಂಡ್ ಭೇಟಿ ಮಾಡಿ ೨೦೨೮ ರವರೆಗೆ ತಾನೇ ಮುಖ್ಯಮಂತ್ರಿಯಾಗಿರುವಂತೆ ನೋಡಿಕೊಳ್ಳಿ. ನಿಮಗೆ ಏನು ಬೇಕು ಆದನ್ನು ನಾನು ಮಾಡುತ್ತೇನೆ ಎಂದು ಹೇಳುವ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಪ್ರತಿಯಾಗಿ ಡಿ.ಕೆ.ಶಿವಕುಮಾರ್ ಸಹ ಮುಖ್ಯಮಂತ್ರಿ ಗಾದಿಯ ಮೇಲೆ ಕಣ್ಣು ಹಾಕಿದ್ದಾರೆ. ಈ ಬಾರಿ ಮುಖ್ಯಮಂತ್ರಿ ಆಗಲೇಬೇಕೆಂದು ಹಠ ಹಿಡಿದಿದ್ದಾರೆ. ಅವರು ಸಹ ಪಕ್ಷದ ಹೈಕಮಾಂಡ್ ಓಲೈಕೆ ಮಾಡಲು ಮುಂದಾಗಿದ್ದಾರೆ. ಇದರಿಂದ ಕಾಂಗ್ರೇಸ್‌ನಲ್ಲಿ ಎರಡು ಗುಂಪು ಉಂಟಾಗಿದೆ ಎಂದರು.
ನವಂಬರ್ ೨೦ ರಂದು ರಾಹುಲ್ ಗಾಂಧಿ ರಾಜ್ಯಕ್ಕೆ ಬರಲಿದ್ದಾರೆ. ಕಾಂಗ್ರೆಸ್ ಪಕ್ಷದ ಕಚೇರಿಯ ಉದ್ಘಾಟನೆ ಬರಲಿದ್ದಾರೆ ಎಂದು ಅವರು ಹೇಳುತ್ತಿದ್ದಾರೆ. ಆದರೆ ಎಲ್ಲಾ ಶಾಸಕರುಗಳ ಅಭಿಪ್ರಾಯ ಪಡೆದು ಸಿ.ಎಂ. ಬದಲಾವಣೆ ಮಾಡಬೇಕೆ, ಬೇಡವೇ ಎಂಬ ಬಗ್ಗೆ ಚಿಂತನೆ ನಡೆಸಲಿದ್ದಾರೆ. ನನ್ನ ಪ್ರಕಾರ ನವೆಂಬರ್ ೧೫ರ ನಂತರ ದೊಡ್ಡ ಕ್ರಾಂತಿಯಾಗಲಿದೆ. ರಾಹುಲ್ ಗಾಂಧಿ ಬಂದು ಹೋದ ನಂತರ ಸಚಿವ ಸಂಪುಟ ವಿಸ್ತರಣೆ ಮಾಡುತ್ತಾರೋ ಅಥವಾ ಮುಖ್ಯಮಂತ್ರಿ ಬದಲಾವಣೆ ಮಾಡುತ್ತಾರೋ ಎಂಬುದನ್ನು ಕದು ನೋಡಬೇಕಿದೆ ಎಂದು ಹೇಳಿದರು.
ಸಚಿವ ಸ್ಥಾನದ ಆಕಾಂಕ್ಷಿಗಳು ಸೂಟ್‌ಕೇಸ್ ಇಟ್ಟುಕೊಂಡು ರೆಡಿಯಾಗಿದ್ದಾರೆ. ಯಾರು ಹಣ ಕೊಟ್ಟವರಿಗೆ ಮಂತ್ರಿ ಸ್ಥಾನ ದೊರೆಯಲಿದೆ. ಯಾರು ಜಾಸ್ತಿ ಹಣ ಕೊಡುತ್ತಾರೋ ಅವರಿಗೆ ಮಂತ್ರಿ ಸ್ಥಾನ ಕೊಡಬೇಕೆನ್ನುವ ಹರಾಜಿಗೆ ನಿಂತಿದ್ದಾರೆ. ಐಪಿಎಲ್ ಕ್ರಿಕೆಟ್‌ನ ಹರಾಜಿನ ರೀತಿಯಲ್ಲಿ ಸಚಿವ ಸ್ಥಾನಗಳ ಹರಾಜು ನಡೆಯಲಿದೆ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೂ ಸರಿಯಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಯಾವುದೇ ಹೊಸ ಕೆಲಸಗಳನ್ನು ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಒಂದು ಕಡೆ ಡಿಕೆಶಿ ಬಣ, ಇನ್ನೊಂದೆಡೆ ಸಿದ್ದರಾಮಯ್ಯ ಬಣ ಎಂಬ ಎರಡು ಬಣಗಳಿವೆ. ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಅಭಿವೃದ್ಧಿ ಇಲ್ಲದೆ ರಾಜ್ಯ ಬರಡಾಗಿದೆ. ಕಾಂಗ್ರೆಸ್ ಪಕ್ಷದ ವಿರುದ್ದ ಮಾತಾಡಿದ ಎಲ್ಲರಿಗೂ ನೋಟಿಸ್ ನೀಡುತ್ತಿದ್ದಾರೆ. ಆದರೆ ಯತಿಂದ್ರ ಅವರಿಗೆ ಏಕೆ ನೋಟೀಸ್ ನೀಡಿಲ್ಲ. ಅಧಿಕಾರಕ್ಕಾಗಿ ಇವರಿಬ್ಬರ ಜಗಳದಲ್ಲಿ ಸರ್ಕಾರ ಬಿದ್ದರೂ ಬೀಳಬಹುದು. ಮಧ್ಯಂತರ ಚುನಾವಣೆ ಬಂದರೆ ಚುನಾವಣೆ ಎದುರಿಸಲು ಬಿಜೆಪಿ ಸಿದ್ಧವಿದೆ ಎಂದರು.
ಯತೀಂದ್ರರವರು ತಮ್ಮ ತಂದೆ ಸಿದ್ದರಾಮಯ್ಯ ಮಾತನ್ನೇ ಹೇಳಿದ್ದಾರೆ. ಸತೀಶ್ ಜಾರಕಿಹೊಳಿ ಅವರಿಗೆ ಆ ಜವಾಬ್ದಾರಿ ಸಿಗುತ್ತದೆ ಎಂದರೆ ಹಿಂದುಳಿದ ಸಮುದಾಯಕ್ಕೆ ಸಿಕ್ಕ ಅವಕಾಶ. ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡುವ ಕಾಲ ಹತ್ತಿರಕ್ಕೆ ಬಂದಿರುವುದರಿಂದ ಅವರು ಎಲ್ಲರನ್ನು ಗೊಂದಲಕ್ಕೆ ಈಡು ಮಾಡಬೇಕೆನ್ನುವ ಉದ್ದೇಶದಿಂದ ಈ ರೀತಿ ಹೇಳಿಸಿರಬಹುದು ಎಂದು ಹೇಳಿದರು.
ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡುವ ಜಾಯಮಾನದವರಲ್ಲ. ಒಮದು ವೇಳೆ ಬಿಟ್ಟುಕೊಟ್ಟರೆ ಡಿಕೆಶಿ ಅವರಿಗೆ ಬಿಟ್ಟುಕೊಡಲ್ಲ. ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿ ಆದರೂ ಆಗಬಹುದು. ಅವರು ಧರ್ಮಸಿಂಗ್‌ರವರ ಕಾಲದಿಂದಲೂ ಕಾಯುತ್ತಿದ್ದಾರೆ. ಟ್ರಂಪ್ ಕಾರ್ಡ್ ಹೇಗೆ ಬದಲಾವಣೆ ಆಗುತ್ತೆ ನೋಡಬೇಕಾಗಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಮಾಜಿ ಅಧ್ಯಕ್ಷ ಎ.ಮುರಳಿ, ಎಸ್.ಟಿ. ಮೋರ್ಚಾದ ಪಾಪೇಶ್ ನಾಯಕ, ಯುವ ಮೋರ್ಚ ಅಧ್ಯಕ್ಷ ಪಾಲಯ್ಯ, ಚಿತ್ರದುರ್ಗ ಗ್ರಾಮಾಂತರ ಮಂಡಲದ ಅಧ್ಯಕ್ಷ ಕೆ.ನಾಗರಾಜ್, ಬಾಳೆಕಾಯಿ ರಾಮದಾಸ್ ಮತ್ತಿತರರು ಹಾಜರಿದ್ದರು.

