ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಣವನ್ನು ಡಬಲ್ ಮಾಡುವುದಾಗಿ ನಂಬಿಸಿ 5 ಕೋಟಿ ರೂಪಾಯಿ ವಂಚಿಸಿರುವ ಘಟನೆ ಉತ್ತರ ಪ್ರದೇಶದ ಬಾಘಪತ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಆಲೋಕ್ ನಾಥ್ ಮತ್ತು ಶ್ರೇಯಸ್ ತಲ್ಪಡೆ ಸೇರಿದಂತೆ ಒಟ್ಟು 22 ಜನರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಮಾಹಿತಿಯ ಪ್ರಕಾರ, ‘ದಿ ಲೋನಿ ಅರ್ಬನ್ ಮಲ್ಟಿ ಸ್ಟೇಟ್ ಕ್ರೆಡಿಟ್ ಆ್ಯಂಡ್ ಥ್ರಿಫ್ಟ್ ಕೋ ಆಪರೇಟಿವ್ ಸೊಸೈಟಿ’ ಎಂಬ ಸಹಕಾರಿ ಸಂಸ್ಥೆಯ ಮೂಲಕ ವಂಚನೆ ನಡೆದಿದೆ. ಈ ಸಂಸ್ಥೆಯು ಹೂಡಿಕೆ ಮಾಡಿದ ಹಣವನ್ನು ಐದು ವರ್ಷಗಳಲ್ಲಿ ಎರಡು ಪಟ್ಟು ಮಾಡುತ್ತೇವೆ ಎಂದು ಜನರನ್ನು ನಂಬಿಸಿತ್ತು. ಆದರೆ, ಕಳೆದೊಂದು ವರ್ಷದಿಂದ ಹೂಡಿಕೆದಾರರಿಗೆ ಯಾವುದೇ ಲಾಭಾಂಶ ಅಥವಾ ಹಣ ಮರುಪಾವತಿಯಾಗಿಲ್ಲ.ಇದರಿಂದ ಬೇಸತ್ತ ಹೂಡಿಕೆದಾರರು ಬಾಘಪತ್ ಕೊತ್ವಾಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಟರಾದ ಶ್ರೇಯಸ್ ತಲ್ಪಡೆ ಮತ್ತು ಆಲೋಕ್ ನಾಥ್ ಈ ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್‌ಗಳಾಗಿ ಹಲವಾರು ಕಾರ್ಯಕ್ರಮಗಳಲ್ಲಿ ಪ್ರಚಾರ ಮಾಡಿದ್ದರು ಎಂದು ಆರೋಪಿಸಲಾಗಿದೆ. ಆದ್ದರಿಂದ ಅವರೂ ಈಗ ಈ ವಂಚನೆ ಪ್ರಕರಣದ ಆರೋಪಿಗಳ ಪಟ್ಟಿಯಲ್ಲಿ ಸೇರಿದ್ದಾರೆ.

