Monday, October 13, 2025

ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆಯಲ್ಲಿ ಶೇಕಡಾ 50ರಷ್ಟು ಮಹಿಳೆಯರಿಗೆ ಟಿಕೆಟ್: ಡಿಕೆಶಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆಯಲ್ಲಿ ಶೇಕಡಾ 50ರಷ್ಟು ಟಿಕೆಟ್ ಅನ್ನು ಮಹಿಳೆಯರಿಗೆ ನೀಡಲಾಗುವುದು. ಆಮೂಲಕ ಮುಂದಿನ ದಿನಗಳಲ್ಲಿ ಬೆಂಗಳೂರಿನ ಪಾಲಿಕೆಗಳಲ್ಲಿ ಅರ್ಧದಷ್ಟು ಮಹಿಳಾ ಕಾರ್ಪೊರೇಟರ್ ಗಳು ಇರುತ್ತಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿಯು ಮೌಂಟ್ ಕಾರ್ಮೆಲ್ ಕಾಲೇಜು ಸಹಯೋಗದಲ್ಲಿ ಕಾಲೇಜು ಆವರಣದಲ್ಲಿ ಬೆಂಗಳೂರು ಅಭಿವೃದ್ಧಿ, ಪರಿವರ್ತನೆ ಕುರಿತು ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಲವಾರು ದಶಕಗಳಿಂದ ಬೆಂಗಳೂರಿನಲ್ಲಿ ಅನೇಕ ಸವಾಲುಗಳಿವೆ. ಜನ ಬೆಂಗಳೂರಿಗೆ ವಲಸೆ ಬರುವುದು ಶಿಕ್ಷಣ, ಉದ್ಯೋಗ ಹಾಗೂ ಉತ್ತಮ ಜೀವನ ಕಟ್ಟಿಕೊಳ್ಳುವ ಆಸೆಯಿಂದ. ಯಾವುದೇ ನಗರದ ಜನಸಂಖ್ಯೆ ಹೆಚ್ಚಿದಾಗ ಸಮಸ್ಯೆಗಳು ಹೆಚ್ಚಾಗುತ್ತವೆ. ಶಿಕ್ಷಣದ ವಿಚಾರದಲ್ಲಿ ಬೆಂಗಳೂರು ದೇಶದ ಇತರೇ ನಗರಗಳಿಗಿಂತ ಉತ್ತಮವಾಗಿದೆ. ಬೆಂಗಳೂರಿನಲ್ಲಿ 25 ಲಕ್ಷ ಐಟಿ ಉದ್ಯೋಗಿಗಳು ಇದ್ದಾರೆ. 2 ಲಕ್ಷ ವಿದೇಶಿ ಪಾಸ್ ಪೋರ್ಟ್ ಹೊಂದಿರುವವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಬೆಂಗಳೂರಿನ ಜನಸಂಖ್ಯೆ 70 ಲಕ್ಷ ಇತ್ತು. ಈಗ ಅದು 1.40 ಕೋಟಿಗೆ ಏರಿದೆ ಎಂದು ಹೇಳಿದ್ದಾರೆ.

error: Content is protected !!