ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ದಿಶಾ ಪಟಾನಿ ಅವರ ಮನೆಯ ಮೇಲೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶಂಕಿತರು ಪೊಲೀಸ್ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದಾರೆ.
ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ರೋಹ್ಟಕ್ ಮೂಲದ ರವೀಂದ್ರ ಅಲಿಯಾಸ್ ಕಲ್ಲು ಮತ್ತು ಹರಿಯಾಣದ ಸೋನಿಪತ್ ನಿವಾಸಿ ಅರುಣ್ ಹತ್ಯೆಯಾಗಿದ್ದಾರೆ. ಇಬ್ಬರೂ ಗೋಲ್ಡಿ ಬ್ರಾರ್ ಗ್ಯಾಂಗ್‌ನ ಸಕ್ರಿಯ ಸದಸ್ಯರಾಗಿದ್ದರು. ಜೊತೆಗೆ ಬಹು ಕ್ರಿಮಿನಲ್ ಪ್ರಕರಣಗಳಲ್ಲಿ ಮೋಸ್ಟ್ ವಾಂಟೆಡ್‌ಗಳಾಗಿದ್ದರು ಎಂದು ತಿಳಿದುಬಂದಿದೆ.
ಈ ವೇಳೆ ಮುಂಭಾಗದಲ್ಲಿದ್ದ ಪೊಲೀಸ್ ಘಟಕದ ಮೇಲೆ ಶಂಕಿತರು ಗುಂಡಿನ ದಾಳಿಗೆ ಮುಂದಾಗಿದ್ದು, ಬಳಿಕ ಪೊಲೀಸರು ಪ್ರತಿದಾಳಿ ನಡೆಸಿದರು. ಈ ವೇಳೆ ಗಾಯಗೊಂಡಿದ್ದ ಶಂಕಿತರು ಬಳಿಕ ಸಾವನ್ನಪ್ಪಿದರು. ಘಟನಾ ಸ್ಥಳದಿಂದ, ಅಧಿಕಾರಿಗಳು ಗ್ಲಾಕ್ ಪಿಸ್ತೂಲ್, ಜಿಗಾನಾ ಪಿಸ್ತೂಲ್ ಮತ್ತು ಬಹು ಲೈವ್ ಕಾರ್ಟ್ರಿಡ್ಜ್‌ಗಳು ಸೇರಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ದಿಶಾ ಪಟಾನಿಯವರ ತಂದೆಯ ಪ್ರಕಾರ, ಸೆಪ್ಟೆಂಬರ್ 11 ರಂದು ಬೆಳಿಗ್ಗೆ 4:33 ರ ಸುಮಾರಿಗೆ ಅವರ ಸಿವಿಲ್ ಲೈನ್ಸ್ ಮನೆಯ ಮೇಲೆ ಮೊದಲ ದಾಳಿ ನಡೆದಿದೆ.
ಇನ್ನು ಎರಡನೇ ದಾಳಿ ಸೆಪ್ಟೆಂಬರ್ 12 ರಂದು ಬೆಳಿಗ್ಗೆ 3:30 ಕ್ಕೆ ನಡೆದಿದ್ದು, ಅದು ಅವರ ಮೇಲಿನ ದಾಳಿ ಎಂದು ಅವರು ಹೇಳಿಕೊಂಡಿದ್ದಾರೆ. ತಮ್ಮ ದೂರಿನಲ್ಲಿ, ತಮ್ಮ ಮಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ನಿಂದನೀಯ ಕಾಮೆಂಟ್‌ಗಳು ಮತ್ತು ಬೆದರಿಕೆಗಳಿಗೆ ಒಳಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.