ಹೊಸದಿಗಂತ ಡಿಜಿಟಲ್ ಡೆಸ್ಕ್:
1940ರ ದಶಕದ ಮದ್ರಾಸ್‌ನಲ್ಲಿ ಬೆಚ್ಚಿಬೀಳಿಸಿದ ನೈಜ ಘಟನೆಯನ್ನು ಆಧರಿಸಿದ ದಿ ಮದ್ರಾಸ್ ಮಿಸ್ಟರಿ – ಫಾಲ್ ಆಫ್ ಎ ಸೂಪರ್‌ಸ್ಟಾರ್ ಎಂಬ ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಸಿನಿಮಾ ನವೆಂಬರ್ 6, 2025 ರಂದು ಸೋನಿಲೈವ್‌ನಲ್ಲಿ ಬಿಡುಗಡೆಯಾಗಲಿದೆ. ಚೊಚ್ಚಲ ನಿರ್ದೇಶಕ ಆಶಿಫ್ ಪವಪೆಟ್ಟಡೈಲ್ ಈ ಸಿನಿಮಾಗೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ನಜ್ರಿಯಾ ನಜೀಮ್ ಫಹಾದ್ ಈ ಮೂಲಕ ಕಾಲಿವುಡ್‌ಗೆ ಮರುಪ್ರವೇಶ ಮಾಡುತ್ತಿದ್ದಾರೆ.
ಈ ಸಿನಿಮಾ ಸ್ವಾತಂತ್ರ್ಯಪೂರ್ವ ಬ್ರಿಟಿಷ್ ಭಾರತದ ಮದ್ರಾಸ್‌ನಲ್ಲಿ ನಡೆದಿದ್ದ ಪತ್ರಕರ್ತ ಸಿ.ಎನ್. ಲಕ್ಷ್ಮಿಕಾಂತನ್ ಅವರ ಹತ್ಯೆ ಪ್ರಕರಣವನ್ನು ಆಧರಿಸಿದೆ. ಚಿತ್ರರಂಗದ ಸೆಲೆಬ್ರಿಟಿಗಳ ಬಗ್ಗೆ ಬರೆದ ಲೇಖನಗಳ ಕಾರಣಕ್ಕೆ ಪ್ರಸಿದ್ಧರಾಗಿದ್ದ ಲಕ್ಷ್ಮಿಕಾಂತನ್ ಮದ್ರಾಸ್‌ನಲ್ಲಿ ಇರಿತಕ್ಕೊಳಗಾಗಿ ಸಾವನ್ನಪ್ಪಿದ ಘಟನೆ ಆ ಕಾಲದಲ್ಲಿ ದೊಡ್ಡ ಸಂಚಲನ ಎಬ್ಬಿಸಿತ್ತು.
ಚಿತ್ರದಲ್ಲಿ ನಜ್ರಿಯಾ ನಜೀಮ್ ಮುಖ್ಯಪಾತ್ರದಲ್ಲಿ ನಟಿಸಿದ್ದು, ನಾಟಿ, ಶಾಂತು ಭಾಗ್ಯರಾಜ್, ನಾಸರ್ ಹಾಗೂ ಹಿರಿಯ ನಟ ವೈಜಿ ಮಹೇಂದ್ರನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಚಿತ್ರವನ್ನು ಗೆಟ್ಟೊ ಎಂಟರ್‌ಟೈನ್‌ಮೆಂಟ್ ಹಾಗೂ ಬಿಗ್ ಪ್ರಿಂಟ್ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಿಸಲಾಗಿದೆ.
ಲಕ್ಷ್ಮಿಕಾಂತನ್ ಕೊಲೆ ಪ್ರಕರಣದಲ್ಲಿ ಅಂದು ಪ್ರಮುಖ ತಮಿಳು ನಟರಾದ ಎಂ.ಕೆ. ತ್ಯಾಗರಾಜ ಭಾಗವತರ್ ಹಾಗೂ ಎನ್.ಎಸ್. ಕೃಷ್ಣನ್ ಆರೋಪಿಗಳಿಗೆಂದು ವಿಚಾರಣೆ ನಡೆಸಲಾಯಿತು. ಆರಂಭದಲ್ಲಿ ತಪ್ಪಿತಸ್ಥರೆಂದು ಘೋಷಿಸಲ್ಪಟ್ಟರೂ, ನಂತರ ಪ್ರಿವಿ ಕೌನ್ಸಿಲ್‌ನಲ್ಲಿ ಖುಲಾಸೆಗೊಳಿಸಲ್ಪಟ್ಟರು. ಆದರೆ ನಿಜವಾದ ಕೊಲೆಗಾರರು ಯಾರೆಂಬುದು ಇನ್ನೂ ರಹಸ್ಯವಾಗಿಯೇ ಉಳಿದಿದೆ.