Friday, September 19, 2025

ಧರ್ಮಸ್ಥಳ ಬಂಗ್ಲೆಗುಡ್ಡೆ ರಹಸ್ಯ: ಎರಡನೇ ದಿನ ಕಾಡಿನಿಂದ ಹೊರಬಂತು ಪ್ಲಾಸ್ಟಿಕ್ ಡಬ್ಬ, ಪೈಪ್‌ಗಳು!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತ ಪ್ರಕರಣ ದಿನದಿಂದ ದಿನಕ್ಕೆ ರೋಚಕ ಘಟ್ಟಕ್ಕೆ ತಿರುಗುತ್ತಿದ್ದು, ಎಲ್ಲರ ಕೂತೂಹಲದ ಕೇಂದ್ರ ಬಿಂದುವಾದ ಬಂಗ್ಲೆಗುಡ್ಡೆ ಪರಿಸರದಿಂದ ಗುರುವಾರ ಎಸ್‌ಐಟಿ ಅಧಿಕಾರಿಗಳು ಮತ್ತಷ್ಟು ಕಳೇಬರದ ಅವಶೇಷಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿರುವುದು ಸ್ಪಷ್ಟವಾಗಿದೆ.

ಗುರುವಾರ ಎಸ್‌ಐಟಿ, ಸೋಕೋ ಟೀಂ ಸುಮಾರು ಮೂರು ತಾಸುಗಳ ಕಾಲ ಬಂಗ್ಲೆಗುಡ್ಡೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆಯಲ್ಲದೆ, ಅಲ್ಲಿಂದ ಪ್ಲಾಸ್ಟಿಕ್ ಡಬ್ಬ, ಪೈಪ್‌ಗಳನ್ನು ಹೊರತಂದಿದೆ. ಈ ದೃಶ್ಯಾವಳಿಗಳು ಎರಡನೇ ದಿನದ ಶೋಧ ಕಾರ್ಯದಲ್ಲಿ ಬಹಳಷ್ಟು ಅವಶೇಷಗಳು ಸಿಕ್ಕಿವೆ ಎಂಬ ಹೇಳಿಕೆಗಳಿಗೆ ಪುಷ್ಟಿ ನೀಡಿದೆ.

ಆದರೆ ಇದರ ಕುರಿತಾದ ಯಾವುದೇ ಮಾಹಿತಿಯನ್ನು ಎಸ್‌ಐಟಿ ಬಹಿರಂಗಪಡಿಸಿಲ್ಲ. ವಾಕಿಂಗ್ ಸ್ಟಿಕ್ ಸಹಿತ ಸ್ಥಳದಲ್ಲಿ ಹಲವಾರು ವಸ್ತುಗಳು ಸಿಕ್ಕಿರುವ ಸಾಧ್ಯತೆ ಇದೆ ಎಂದು ಅಲ್ಲಿದ್ದ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಮೊದಲಿಗೆ ನೂರಾರು ಶವ ಹೂತಿದ್ದೇನೆ ಎಂದು ಮಾನವ ತಲೆಬುರುಡೆಯೊಂದಿಗೆ ಬಂದಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯನ ದೂರು ದಾಖಲಿಸಿಕೊಂಡ ಎಸ್‌ಐಟಿ, ಬಳಿಕ ಇದೇ ಆಯಾಮದಲ್ಲಿ ಹೆಚ್ಚಿನ ತನಿಖೆ ಶುರುವಿಟ್ಟುಕೊಂಡಿತ್ತು. ಆತ ಹೇಳಿದ್ದ ವಿವಿಧ ಪಾಯಿಂಟ್‌ಗಳಲ್ಲಿ ಉತ್ಖನನ ನಡೆಸಿತ್ತಾದರೂ ನಿರೀಕ್ಷಿತ ಫಲಿತಾಂಶ ಸಿಗದ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಿತ್ತು. ಈ ಸಂದರ್ಭ ಆತ ಸಾಕ್ಷಿಗಾಗಿ ತಂದಿದ್ದ ತಲೆಬುರುಡೆ ಬಂಗ್ಲೆಗುಡ್ಡೆ ಪರಿಸರದ್ದು ಹಾಗೂ ಇದನ್ನು ವಿಠಲ ಗೌಡ ಎಂಬವರು ನೀಡಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ತನಿಖೆ ಬಂಗ್ಲೆಗುಡ್ಡೆಗೆ ವಿಸ್ತರಣೆಯಾಗಿತ್ತು.

ಇದನ್ನೂ ಓದಿ