ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರವು ಜಾತಿಗಣತಿಗೆ ಹೊಸ ಉಪಜಾತಿಗಳ ಸೃಷ್ಟಿ ಮಾಡಿದೆ ಎಂದು ಅರೋಪಿಸಿ ರಾಜ್ಯ ಸರ್ಕಾರದ ಜಾತಿಗಣತಿ ರದ್ದುಪಡಿಸುವಂತೆ ಕೋರಿ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಲಾಗಿದೆ.
ವಕೀಲ ಕೆ.ಎನ್. ಸುಬ್ಬಾರೆಡ್ಡಿ ಸೇರಿದಂತೆ ನಾಲ್ವರು ಸಲ್ಲಿಸಿರುವ ಅರ್ಜಿಯಲ್ಲಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಜಾತಿಗಣತಿ ನಡೆಸುವ ಅಧಿಕಾರ ಇಲ್ಲ ಎಂದು ವಾದಿಸಿದ್ದಾರೆ.
ಅಲ್ಲದೆ, ಸರ್ಕಾರವು 1,500 ಜಾತಿಗಳು ಮತ್ತು ಉಪಜಾತಿಗಳನ್ನು ಸರಿಯಾಗಿ ವರ್ಗೀಕರಿಸದೆ ಒಂದಕ್ಕೊಂದು ಮಿಶ್ರಣ ಮಾಡಿದೆ. ಇದು ಕಾನೂನು ಬಾಹಿರ ಮತ್ತು ಅಧಿಕಾರ ವ್ಯಾಪ್ತಿ ಮೀರಿದ ಕ್ರಮ ಎಂದು ಆರೋಪಿಸಿದ್ದಾರೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ, ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಹಿಂದುಳಿದ ವರ್ಗಗಳ ಇಲಾಖೆಯ ಕಾರ್ಯದರ್ಶಿ, ಕೇಂದ್ರ ಗೃಹ ಸಚಿವಾಲಯ ಹಾಗೂ ಭಾರತ ಜನಗಣತಿ ಆಯೋಗವನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಈ ಗಣತಿ ಪ್ರಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಅರ್ಜಿದಾರರು ಮನವಿ ಮಾಡಿದ್ದಾರೆ.
ವಿವಿಧ ಹಿಂದುಳಿದ ಸಮುದಾಯಗಳ ಮುಖಂಡರು ಸಲ್ಲಿಸಿರುವ ಎರಡನೇ ಅರ್ಜಿಯಲ್ಲಿ, ಸರ್ಕಾರ ಜಾತಿ ಸಮೀಕ್ಷೆ ನಡೆಸಲು ಬಿಎನ್‌ಎಸ್ 340 ಮತ್ತು 341ರ ಪ್ರಕಾರ ಯಾವುದೇ ಅಧಿಕಾರ ಹೊಂದಿಲ್ಲ ಎಂದು ವಾದಿಸಲಾಗಿದೆ.
ಈ ಎಲ್ಲ ಅಂಶಗಳನ್ನು ಉಲ್ಲೇಖಿಸಿ, ಸರ್ಕಾರ ಜಾತಿ ಗಣತಿ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸುವಂತೆ ತಡೆಯಾಜ್ಞೆ ನೀಡಬೇಕೆಂದು ಅರ್ಜಿದಾರರು ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಸದ್ಯ ಎರಡೂ ಅರ್ಜಿಗಳು ವಿಚಾರಣೆಗೆ ನಿಗದಿಯಾಗಬೇಕಿದ್ದು, ಮುಂದಿನ ದಿನಗಳಲ್ಲಿ ಹೈಕೋರ್ಟ್‌ನ ತೀರ್ಪು ಜಾತಿ ಗಣತಿಯ ಭವಿಷ್ಯ ನಿರ್ಧರಿಸಲಿದೆ.