Saturday, September 20, 2025

ಈಗಾಗಲಾದರೂ ಸಿಎಂ ಸಿದ್ದರಾಮಯ್ಯ ಎಚ್ಚೆತ್ತುಕೊಳ್ಳಬೇಕು: ಕೆ.ಎಸ್.ಈಶ್ವರಪ್ಪ

ಹೊಸದಿಗಂತ ವರದಿ ಶಿವಮೊಗ್ಗ:

ಜಾತಿ ಸಮೀಕ್ಷೆಗೆ ಸಚಿವ ಸಂಪುಟ ಸಭೆಯಲ್ಲಿಯೇ ಸಚಿವರಿಂದ ವಿರೋಧ ವ್ಯಕ್ತವಾಗಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಗಿರುವ ಮುಖಭಂಗ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ವಿಶ್ಲೇಷಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಜಾತಿ ಗಣತಿ ಬಗ್ಗೆ ನಾನು ಆರಂಭದಿಂದಲೇ ವಿರೋಧ ಮಾಡುತ್ತಿದ್ದೇನೆ. ಈಗ ಸಮಸ್ತ ಹಿಂದು ಸಮಾಜ ಇದರ ವಿರುದ್ಧ ತಿರುಗಿ ಬಿದ್ದಿದೆ. ಈಗಾಗಲಾದರೂ ಸಿದ್ದರಾಮಯ್ಯ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದರೆ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಸರ್ಕಾರ ಜಾತಿ ಸಮೀಕ್ಷೆ ಹೆಸರಿನಲ್ಲಿ ಹೊಸದಾಗಿ 331 ಜಾತಿಗಳನ್ನು ಸೃಷ್ಟಿ ಮಾಡಿದೆ. 50 ಕ್ರಿಶ್ಚಿಯನ್ ಜಾತಿಗಳನ್ನು ಸೃಷ್ಟಿ ಮಾಡಿದ್ದಾರೆ. ಈ ಮೂಲಕ ಹಿಂದುಗಳ ಸಂಖ್ಯೆಯನ್ನು ಕಡಿಮೆ ಮಾಡಿ ತೋರಿಸುವ ಷಡ್ಯಂತ್ರವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಹಾಗಾಗಿ ಸಂಘರ್ಷ ಭುಗಿಲೆದ್ದಿದೆ. ಇದು ಎಲ್ಲರಿಗೂ ಅರ್ಥವಾಗಿದೆ. ಹಾಗಾಗಿಯೇ ಸಂಪುಟ ಸಭೆಯಲ್ಲಿ ಬಹುತೇಕ ಸಚಿವರು ಇದನ್ನು ವಿರೋಧ ಮಾಡಿದ್ದಾರೆ. ಆ ಎಲ್ಲಾ ಸಚಿವರಿಗೂ ಧನ್ಯವಾದ ಸಲ್ಲಿಸುತ್ತೇನೆ. ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ನಿರ್ಧಾರಕ್ಕೆ ಬಹುಮತದ ವಿರೋಧ ಮಾಡಿರುವುದು ಕರ್ನಾಟಕದ ಇತಿಹಾಸದಲ್ಲೇ ಮೊದಲು ಎಂದು ವ್ಯಾಖ್ಯಾನಿಸಿದರು.

ನಾನು ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಚಾಂಪಿಯನ್ ಎಂದು ಹೇಳಿಕೊಳ್ಳುತ್ತಿದ್ದ ಸಿದ್ದರಾಮಯ್ಯ ಮುಖ್ಯಮಂತ್ರಿ ಖುರ್ಚಿಗಾಗಿ ಅದನ್ನೆಲ್ಲಾ ತ್ಯಾಗ ಮಾಡಿದ್ದಾರೆ. ಇದನ್ನು ಇಲ್ಲಿಗೆ ಕೈಬಿಡದೇ ಹೋದರೆ ಅಧಿಕಾರವನ್ನು ಕಳೆದುಕೊಳ್ಳುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ