ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನಾನು ಈ ಮಣ್ಣಿನಲ್ಲಿ ಹುಟ್ಟಿದ್ದೇನೆ, ಇಲ್ಲಿಯೇ ಬದುಕಿದ್ದೇನೆ, ಇಲ್ಲಿಯೇ ಸಾಯುತ್ತೇನೆ. ಈ ಅಂಶ ನಿಮ್ಮ ತಲೆಯಲ್ಲಿರಲಿ. ಇದು ನಮ್ಮ ಜಿಲ್ಲೆ, ಇಲ್ಲಿಂದ ನಾನು ತೆಗೆದುಕೊಂಡು ಹೋಗುವುದು ಏನೂ ಇಲ್ಲ. ಇಲ್ಲಿನ ಜನರಿಗೆ ಶಕ್ತಿ ನೀಡುವುದೇ ನನ್ನ ಆದ್ಯತೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ರಾಮನಗರದಲ್ಲಿ ಶುಕ್ರವಾರ ನಡೆದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಮನಗರ ಕ್ಷೇತ್ರದ ಜನತೆಗೆ 100 ಎಕರೆ ಪ್ರದೇಶದಲ್ಲಿ ನಿವೇಶನ ಹಂಚಬೇಕು ಎಂದು ಜಿಲ್ಲೆಯ ಪ್ರತಿನಿಧಿಗಳ ಸಭೆ ಕರೆದು ಈಗಾಗಲೇ ತೀರ್ಮಾನ ಮಾಡಲಾಗಿದೆ. ಬಗರ್ ಹುಕುಂ ಸೇರಿದಂತೆ, ಭೂ ಸುಧಾರಣಾ ಕಾಯ್ದೆಯಡಿ ಮಂಜೂರಾತಿಗೆ ಬಾಕಿ ಇರುವ ಭೂಮಿಗಳನ್ನು ಆದಷ್ಟು ಬೇಗ ವಿಲೇವಾರಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ದೇವರು ಅವಕಾಶ ಮಾತ್ರ ಕೊಡುತ್ತಾನೆ. ಸಿಕ್ಕಂತಹ ಅವಕಾಶವನ್ನು ಬಳಸಿಕೊಂಡು ಬಡ ಜನರ ಏಳಿಗೆ ಮಾಡದಿದ್ದರೆ ಅಧಿಕಾರವಿದ್ದು ಏನು ಲಾಭ? ಕನಕಪುರದಲ್ಲಿ ಸುಮಾರು 100 ಎಕರೆ ಪ್ರದೇಶದಲ್ಲಿ ಜನರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. ಮಹಿಳೆಯರ ಹೆಸರಿಗೆ ಈ ನಿವೇಶನಗಳನ್ನು ಮಂಜೂರು ಮಾಡಲಾಗಿದೆ. ನಾನು ಸುಮಾರು 8 ಸಾವಿರ ಮಂದಿಗೆ ಬಗರ್ ಹುಕುಂ ಜಮೀನು ನೀಡಿದ್ದೇನೆ. ಈಗ ಡಿ. ಕೆ. ಸುರೇಶ್ ಅವರಿಗೆ ಈ ಸಮಿತಿಯ ಜವಾಬ್ದಾರಿ ನೀಡಲಾಗಿದೆ ಎಂದು ಹೇಳಿದರು.
ನಮ್ಮನ್ನು ಟೀಕೆ ಮಾಡಿದ ವಿರೋಧ ಪಕ್ಷಗಳು ಈಗ ನಮ್ಮನ್ನೇ ಅನುಕರಣೆ ಮಾಡುತ್ತಿವೆ. ಹರಿಯಾಣ, ಮಹಾರಾಷ್ಟ್ರ, ಗೋವಾ ಸೇರಿದಂತೆ ದೇಶದ ಅನೇಕ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿವೆ. ಬದುಕಿನ ಮೇಲೆ ನಾವು ರಾಜಕಾರಣ ಮಾಡುವ ನಾವು ಕಳೆದ ಎರಡು ವರ್ಷದಲ್ಲಿ ಸುಮಾರು 1 ಲಕ್ಷ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಖಾತೆಗೆ ಹಾಕಿದ್ದೇವೆ. ಮಹಿಳೆಯರು ಸಂಸಾರವನ್ನು ತೂಗಿಸುತ್ತಾರೆ ಎಂದು ಅವರಿಗೆ ಹೆಚ್ಚು ಪ್ರಯೋಜನ ನೀಡಲಾಗಿದೆ. ಅವರು ಮಕ್ಕಳ ಭವಿಷ್ಯಕ್ಕೆ ಗ್ಯಾರಂಟಿ ಯೋಜನೆಗಳ ಹಣ ಬಳಕೆ ಮಾಡುತ್ತಾರೆ ಎಂಬುದು ನಮ್ಮ ಆಲೋಚನೆ ಎಂದರು.