Monday, September 22, 2025

ಬ್ಯೂಟಿ ಪಾರ್ಲರ್-ಮಸಾಜ್ ಸೆಂಟರ್ ಹೆಸರಿನಲ್ಲಿ ವೇಶ್ಯಾವಾಟಿಕೆ: ಇಬ್ಬರ ವಿರುದ್ದ ಪ್ರಕರಣ ದಾಖಲು

ಹೊಸದಿಗಂತ ವರದಿ ವೀರಾಜಪೇಟೆ:

ಖಾಸಗಿ ಕಟ್ಟಡವನ್ನು ಬಾಡಿಗೆಗೆ ಪಡೆದು ಬ್ಯೂಟಿಪಾರ್ಲರ್’ನೊಂದಿಗೆ ಪರವಾನಗಿ ಇಲ್ಲದೆ ಸ್ಪಾ ಸೆಂಟರ್ ನಡೆಸುತ್ತಿದ್ದ ಕೇರಳ ಮೂಲದ ಇಬ್ಬರ ವಿರುದ್ಧ ವೀರಾಜಪೇಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಪ್ರದೀಪನ್ ಮತ್ತು ಶಿಜು ಎಂಬವರ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹೆಚ್ಚಿನ ತನಿಖೆಗೆ ಉನ್ನತ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ

ಏನಿದು ಘಟನೆ:
ವೀರಾಜಪೇಟೆಯ ಗಾಂಧಿನಗರದ ಖಾಸಗಿ ಕಟ್ಟಡದಲ್ಲಿ ಪ್ರದೀಪನ್ ಮತ್ತು ಶಿಜು ಎಂಬವರು ಅನುರಾಧ ಎಂಬವರ ಹೆಸರಿನಲ್ಲಿ ಬ್ಯೂಟಿ ಪಾರ್ಲರ್ ಮತ್ತು ಸ್ಪಾ. ನಡೆಸುತಿದ್ದರು.

ಇಲ್ಲಿ ಸುಮಾರು ಆರು ತಿಂಗಳುಗಳಿಂದ ಹೊರ ರಾಜ್ಯಗಳ ಐಷಾರಾಮಿ ವಾಹನಗಳು ಬಂದು ನಿಲುಗಡೆಗೊಂಡು ಮರಳುತ್ತಿದ್ದು, ಸಮಾಜಕ್ಕೆ ವಿರುದ್ಧವಾದ ಚಟುವಟಿಕೆಗಳು ನಡೆಯುತ್ತಿದೆ ಎಂಬುದಾಗಿ ಸ್ಥಳೀಯರಲ್ಲಿ ಸಂಶಯ ಮೂಡಿತ್ತು. ಈ ಹಿನ್ನೆಲೆಯಲ್ಲಿ ಕೆಲವರು ಮೌಖಿಕವಾಗಿ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಬ್ಯೂಟಿ ಪಾರ್ಲರ್ ಮೇಲೆ ದಾಳಿ ನಡೆಸಿದ್ದು,ಈ ವೇಳೆ ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ಪರವಾನಗಿ ಪಡೆದು ಅಕ್ರಮವಾಗಿ ಸ್ಪಾ, ಮಸಾಜ್ ಸೆಂಟರ್ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ಅಲ್ಲದೆ ಕೆಲವು ಮಹಿಳೆಯರು ಮತ್ತು ಹುಡುಗಿಯರನ್ನು ಗುರುತು ಮಾಡಿಸಿ ಗ್ರಾಹಕರಿಗೆ ದೈಹಿಕ ಸುಖಕ್ಕಾಗಿ ವಿತರಣೆ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ದಾಳಿಯ ವೇಳೆ ಕೊಡಗು ಜಿಲ್ಲೆಯ ಯುವತಿ ಸೇರಿದಂತೆ ಮಂಗಳೂರು ಮತ್ತು ತಮಿಳುನಾಡು ಮೂಲದ ಮಹಿಳೆಯರನ್ನು ಪೊಲಿಸರು ರಕ್ಷಣೆ ಮಾಡಿದ್ದಾರೆ.

ಅಕ್ರಮವಾಗಿ ಸ್ಪಾ: ಅಕ್ರಮವಾಗಿ ಮಸಾಜ್ ಸೆಂಟರ್ ನಡೆಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ಇದೀಗ ಹೆಚ್ಚಿನ ತನಿಖೆಗಾಗಿ ಉನ್ನತ ಅಧಿಕಾರಿಗಳ ಆದೇಶಕ್ಕೆ ಮೊರೆ ಹೋಗಿದ್ದಾರೆ.
ಪ್ರಕರಣ ಹಿಂದಿರುವ ರಹಸ್ಯ, ಪ್ರಕರಣದಲ್ಲಿ ಶಾಮೀಲಾಗಿರುವ ಇತರ ವ್ಯಕ್ತಿಗಳು, ಪ್ರಕರಣದ ಪ್ರಮುಖ ಪಿಂಪ್ ಹೀಗೆ ಹಲವು ಸಂಗತಿಗಳು ಪೊಲೀಸರ ಮುಂದಿನ ತನಿಖೆಯಿಂದ ಬೆಳಕಿಗೆ ಬರಬೇಕಿದೆ.

ಕಳೆದ 6 ತಿಂಗಳಿಂದ ಈ ಅಕ್ರಮ ವ್ಯವಹಾರ ತಾಲೂಕು ಕಚೇರಿ, ಪೊಲೀಸ್ ವಸತಿ ಗೃಹಗಳ ಸಮೀಪವೃ ನಡೆಯುತ್ತಿದ್ದರೂ ಸಂಬಂಧಿಸಿದ ಇಲಾಖೆಯವರ ಗಮನಕ್ಕೆ ಬಾರದಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ವೀರಾಜಪೇಟೆಯ ಕೆಲವೊಂದು ಬಡಾವಣೆಯಲ್ಲಿ ಹೈಟೆಕ್ ವೇಶ್ಯಾವಾಟಿಕೆ ಕೂಡಾ ನಡೆಯುತ್ತಿದೆ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಪೊಲೀಸ್ ಇಲಾಖೆ ಸಮಗ್ರ ತನಿಖೆ ಕೈಗೊಂಡರೆ ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆಯಿದೆ.

ಇದನ್ನೂ ಓದಿ