Sunday, January 11, 2026

ಬೆಂಗಳೂರಿನಲ್ಲಿ ನ. 4ರಿಂದ ಮೊಟ್ಟ ಮೊದಲ ಕೌಶಲ್ಯ ಶೃಂಗಸಭೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೌಶಲ್ಯಾಭಿವೃದ್ದಿಗೆ ಒತ್ತು ನೀಡುವ ನಿಟ್ಟಿನಲ್ಲಿ ನವೆಂಬರ್‌ನಲ್ಲಿ ಬೆಂಗಳೂರು ಕೌಶಲ್ಯ ಶೃಂಗಸಭೆ-2025 ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಕೌಶಲ್ಯಾಭಿವೃದ್ಧಿ ಸಚಿವ ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಬೆಂಗಳೂರಿನ ಹೋಟೆಲ್ ಲಲಿತ್ ಅಶೋಕ್‌ನಲ್ಲಿ ನವೆಂಬರ್ 4ರಿಂದ 6ರವರೆಗೆ ಈ ಶೃಂಗಸಭೆ ನಡೆಯಲಿದೆ. ಇದೇ ಮೊದಲ ಬಾರಿಗೆ ಇಂಥ ಮಹತ್ವಾಕಾಂಕ್ಷೆಯ ಸಮಾವೇಶವನ್ನು ಆಯೋಜಿಸಲಾಗುತ್ತಿದೆ. ಮುಖ್ಯಮಂತ್ರಿಗಳು ಈ ಶೃಂಗಸಭೆಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಬೆಂಗಳೂರು ಕೌಶಲ್ಯ ಶೃಂಗಸಭೆಯ ಮೂಲಕ ಯುವ ಸಮುದಾಯಕ್ಕೆ ಮುಖ್ಯವಾಗಿ ಮಹಿಳೆಯರು, ಗ್ರಾಮೀಣ ಸಮುದಾಯಗಳು ಮತ್ತು ಅಂಗವಿಕಲರಿಗೆ ಹೆಚ್ಚು ಆದ್ಯತೆ ನೀಡಲು ಗಮನಹರಿಸಲಾಗುವುದು. ಕೌಶಲ್ಯದ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಲು ನಮ್ಮ ಸರ್ಕಾರ ಅವಕಾಶಗಳ ಬೃಹತ್‌ ವೇದಿಕೆ ಒದಗಿಸುತ್ತಿದೆ. ಕೈಗಾರಿಕೆ, ಶೈಕ್ಷಣಿಕ, ತರಬೇತಿ ಮತ್ತು ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಯುವ ಸಮೂಹವನ್ನು ಬೆಳೆಸಲು ಹಾಗೂ ಉದ್ಯೋಗವನ್ನು ಹೆಚ್ಚಿಸುವ ಗುರಿಯನ್ನು ಈ ಶೃಂಗಸಭೆ ಹೊಂದಿದೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಹೀಗಾಗಿ ಕೌಶಲ್ಯ ಶೃಂಗಸಭೆ ಆಯೋಜಿಸಬೇಕು ಎಂದು ಈ ಹಿಂದೆಯೇ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದಕ್ಕೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ ಹಿನ್ನೆಲೆಯಲ್ಲಿ ಸ್ಕಿಲ್‌ ಸಮ್ಮಿಟ್‌ ಕಾರ್ಯರೂಪಕ್ಕೆ ಬರುತ್ತಿದೆ ಎಂದು ತಿಳಿಸಿದರು.

ಮುಂಬರುವ ದಿನಗಳಲ್ಲಿ ಕೌಶಲ್ಯ ನೀತಿ ರೂಪಿಸಲಾಗುತ್ತದೆ. ಕರ್ನಾಟಕದಲ್ಲಿ ಮಾನವ ಸಂಪನ್ಮೂಲ ಅಗಾಧವಾಗಿದೆ. ಅದಕ್ಕೆ ಸ್ಪಷ್ಟ ರೂಪ, ಕೌಶಲ್ಯ ತರಬೇತಿ ನೀಡಿದರೆ ನಮ್ಮ ರಾಜ್ಯ ಮತ್ತು ನಮ್ಮ ರಾಜಧಾನಿ ಅತ್ಯಂತ ವೇಗವಾಗಿ ಬೆಳೆಯುವ ವಿಶ್ವಾಸವಿದೆ ಎಂದರು.

ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಇ.ವಿ.ರಮಣ ರೆಡ್ಡಿ ಮಾತನಾಡಿ, ಯುವನಿಧಿ ಗ್ಯಾರಂಟಿ ಯೋಜನೆಯಿಂದ ಸಾವಿರಾರು ಯುವಕರಿಗೆ ಅನುಕೂಲವಾಗಿದೆ. ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಬೇಕು ಎನ್ನುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಈ ರೀತಿಯ ವಿಶೇಷ ತರಬೇತಿ ದೊರೆತರೆ ಯುವ ಸಮೂಹ ಅಂತಾರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ಉದ್ಯೋಗ ಗಿಟ್ಟಿಸಲು ಸಮರ್ಥವಾಗುತ್ತದೆ. ಈ ನಿಟ್ಟಿನಲ್ಲಿ ಕೌಶಲ್ಯ ಶೃಂಗಸಭೆ ಅತ್ಯುತ್ತಮ ವೇದಿಕೆ ಒದಗಿಸಲಿದೆ ಎಂದು ತಿಳಿಸಿದರು.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!