ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮತ್ತು ಐಶ್ವರ್ಯಾ ರಾಜೇಶ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಮಫ್ತಿ ಪೊಲೀಸ್ ಸಿನಿಮಾದ ಟೀಸರ್ ಭರ್ಜರಿಯಾಗಿ ಬಿಡುಗಡೆಯಾಗಿದೆ. ಜಿ.ಎಸ್. ಆರ್ಟ್ಸ್ ನಿರ್ಮಿಸಿರುವ ಈ ಚಿತ್ರವನ್ನು ನಿರ್ಮಾಪಕ ಜಿ.ಅರುಲ್ ಕುಮಾರ್ ಪ್ರಸ್ತುತಪಡಿಸಿದ್ದು, ದಿನೇಶ್ ಲೆಟ್ಚುಮನನ್ ನಿರ್ದೇಶನದ ಮೊದಲ ಚಿತ್ರವಾಗಿಯೂ ಇದು ಗುರುತಿಸಿಕೊಂಡಿದೆ.
ಕ್ರೈಂ ಥ್ರಿಲ್ಲರ್ ಶೈಲಿಯ ಈ ಸಿನಿಮಾದಲ್ಲಿ ಕಾನೂನು, ನ್ಯಾಯ ಮತ್ತು ನೀತಿ ನಡುವಿನ ಹೋರಾಟವನ್ನು ಚಿತ್ರಿಸಲಾಗಿದೆ. “ಕಾನೂನನ್ನು ನ್ಯಾಯ ಮೀರಬಹುದು, ನ್ಯಾಯವನ್ನು ನೀತಿ ಮೀರಬಹುದು. ಆದರೆ ಅಂತಿಮ ಲೆಕ್ಕಾಚಾರದಲ್ಲಿ ನೀತಿಯೇ ಗೆಲ್ಲುತ್ತದೆ” ಎಂಬ ಬಲಿಷ್ಠ ಸಂದೇಶದೊಂದಿಗೆ ಕಥಾಹಂದರ ಕಟ್ಟಲಾಗಿದೆ.
ಬಿಡುಗಡೆಯಾದ ಟೀಸರ್‌ನಲ್ಲಿ ಅರ್ಜುನ್ ಸರ್ಜಾ ತಮ್ಮ ಸ್ಫೋಟಕ ಆಕ್ಷನ್ ದೃಶ್ಯಗಳ ಮೂಲಕ ಅಭಿಮಾನಿಗಳನ್ನು ಕಣ್ತುಂಬಿಸಿದ್ದಾರೆ. ಐಶ್ವರ್ಯಾ ರಾಜೇಶ್ ಪ್ರಮುಖ ಪಾತ್ರದಲ್ಲಿ ಕಂಗೊಳಿಸಿದ್ದು, ಬಿಗ್ ಬಾಸ್ ಖ್ಯಾತಿಯ ಅಭಿರಾಮಿ, ರಾಮ್ಕುಮಾರ್, ಜಿ.ಕೆ. ರೆಡ್ಡಿ, ಪಿ.ಎಲ್. ತೇನಪ್ಪನ್, ಬರಹಗಾರ-ನಟ ವೇಲಾ ರಾಮಮೂರ್ತಿ, ತಂಗದುರೈ, ಪ್ರಾಂಕ್ಸ್ಟರ್ ರಾಹುಲ್, ಒ.ಎ.ಕೆ. ಸುಂದರ್ ಸೇರಿದಂತೆ ಹಲವರು ನಟಿಸಿದ್ದಾರೆ.
ಚಿತ್ರದ ಛಾಯಾಗ್ರಹಣವನ್ನು ಸರವಣನ್ ಅಭಿಮನ್ಯು ನಿರ್ವಹಿಸಿದ್ದು, ಸಂಗೀತವನ್ನು ಆಶಿವಗನ್ ನೀಡಿದ್ದಾರೆ. ಲಾರೆನ್ಸ್ ಕಿಶೋರ್ ಸಂಕಲನ ಮಾಡಿದ್ದಾರೆ. ಆಡಿಯೋ, ಟ್ರೇಲರ್ ಮತ್ತು ಸಿನಿಮಾ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ತಂಡ ಪ್ರಕಟಿಸಲಿದೆ.
ಮಫ್ತಿ ಪೊಲೀಸ್ ಸಿನಿಮಾ ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡದಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದ್ದು, ಈ ವರ್ಷದ ಕ್ರೈಂ ಥ್ರಿಲ್ಲರ್ ಪ್ರೇಮಿಗಳಿಗೆ ಹೊಸ ಅನುಭವ ನೀಡುವ ನಿರೀಕ್ಷೆಯಿದೆ.