ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ ರಾಜ್ಯದ ಭಾವನಗರಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ದೂರದಲ್ಲಿ ಓರ್ವ ಬಾಲಕ ಬಹಳ ಹೊತ್ತಿನಿಂದ ತಾನೇ ಬಿಡಿಸಿದ್ದ ಪ್ರಧಾನಿ ಮೋದಿಯ ಚಿತ್ರವನ್ನು ತೋರಿಸುತ್ತಾ ಕೈಬೀಸುತ್ತಿದ್ದದನ್ನು ಗಮನಿಸಿ ತಮ್ಮ ಸಿಬ್ಬಂದಿಯ ಬಳಿ ಆ ಚಿತ್ರವನ್ನು ತೆಗೆದುಕೊಂಡು ಬರಲು ಸೂಚಿಸಿದರು.
‘ಒಬ್ಬ ಪುಟ್ಟ ಹುಡುಗ ನನ್ನ ಚಿತ್ರ ಬಿಡಿಸಿದ್ದಾನೆ. ಇಷ್ಟು ಹೊತ್ತು ಅಲ್ಲಿ ನಿಂತು ಆ ಚಿತ್ರವನ್ನು ತೋರಿಸುತ್ತಿರುವುದರಿಂದ ಅವನ ಕೈಗಳು ನೋಯುತ್ತಿರಬಹುದು. ಯಾರಾದರೂ ದಯವಿಟ್ಟು ಅದನ್ನು ತೆಗೆದುಕೊಂಡು ಬನ್ನಿ. ಚೆನ್ನಾಗಿ ಚಿತ್ರ ಬಿಡಿಸಿದ್ದ ಮಗುವೇ’ ಎಂದು ಪ್ರಧಾನಿ ಮೋದಿ ಹೇಳಿದರು.
ಆಗ ಅಲ್ಲಿದ್ದ ಸಿಬ್ಬಂದಿ ಆ ಬಾಲಕನ ಬಳಿ ಹೋಗಿ ಪ್ರಧಾನಿ ಮೋದಿಯ ಚಿತ್ರವನ್ನು ತೆಗದುಕೊಂಡು ಮೋದಿಗೆ ನೀಡಿದರು.
ತಾನು ಬಿಡಿಸಿದ ಚಿತ್ರ ಮೋದಿಯನ್ನು ತಲುಪಿದ ಕೂಡಲೆ ಭಾವುಕನಾದ ಆ ಪುಟ್ಟ ಬಾಲಕ ಅಳತೊಡಗಿದನು. ಅದನ್ನು ನೋಡಿ ಪ್ರಧಾನಿ ಮೋದಿ ಆತನಿಗೆ ಸಾಂತ್ವನ ಹೇಳಿದ್ದಾರೆ. ನೀನು ಬಿಡಿಸಿದ ಚಿತ್ರ ನನಗೆ ಸಿಕ್ಕಿತು, ಇನ್ನು ಅಳುವ ಅಗತ್ಯವಿಲ್ಲ. ಅದರ ಮೇಲೆ ನಿನ್ನ ವಿಳಾಸವಿದ್ದರೆ ನಾನು ಖಂಡಿತ ನಿನಗೆ ಪತ್ರ ಬರೆಯುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಇದಾದ ನಂತರ ಆ ಬಾಲಕ ನೀರು ಕುಡಿದು ಅಳು ನಿಲ್ಲಿಸಿದನು. ಮೋದಿಯವರ ಸಿಬ್ಬಂದಿ ಆ ಬಾಲಕನಿಂದ ಆತನ ವಿಳಾಸವನ್ನು ತೆಗೆದುಕೊಂಡರು.