Sunday, September 21, 2025

ಮೋಹನ್​​ಲಾಲ್​​ಗೆ ಫಾಲ್ಕೆ ಪ್ರಶಸ್ತಿ: ಶುಭಾಶಯ ಕೋರಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಲಯಾಳಂ ಚಿತ್ರರಂಗದ ಹೆಮ್ಮೆಯ ನಟ ಹಾಗೂ ಭಾರತದ ಸಿನೆಮಾ ಲೋಕದ ಶ್ರೇಷ್ಠ ಕಲಾವಿದರಲ್ಲಿ ಒಬ್ಬರಾದ ಮೋಹನ್ ಲಾಲ್ ಅವರಿಗೆ ಈ ಬಾರಿ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆಯಾಗಿದ್ದು, ಸೆಪ್ಟೆಂಬರ್ 23ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಮಹತ್ವದ ಗೌರವದ ಸುದ್ದಿ ಹೊರಬಿದ್ದ ತಕ್ಷಣವೇ ರಾಜಕಾರಣಿಗಳು, ಸಿನಿ ತಾರೆಯರು ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆ ಬಂದಿದೆ.

ಕೇಂದ್ರ ರೈಲ್ವೆ ಹಾಗೂ ಮಾಹಿತಿ ಪ್ರಸಾರ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಟ್ವೀಟ್ ಮೂಲಕ ಶುಭಾಶಯಗಳನ್ನು ಕೋರಿದ್ದಾರೆ. ಅವರು ತಮ್ಮ ಸಂದೇಶದಲ್ಲಿ, “ಮೋಹನ್ ಲಾಲ್ ಅವರಿಗೆ ಹಾರ್ದಿಕ ಅಭಿನಂದನೆಗಳು. ಕೇರಳದ ಅಡಿಪೋಲಿಯಿಂದ ಪ್ರಾರಂಭಿಸಿ ವಿಶ್ವದಾದ್ಯಂತ ಇರುವ ಸಿನಿಪ್ರೇಮಿಗಳ ಹೃದಯಗಳನ್ನು ಗೆದ್ದಿದ್ದೀರಿ. ನಿಮ್ಮ ಕಲಾ ಪ್ರಯಾಣ ಭಾರತೀಯ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಾ ಬಂದಿದೆ ಹಾಗೂ ನಮ್ಮ ಆಸೆ-ಕನಸುಗಳಿಗೆ ಸ್ಪೂರ್ತಿ ನೀಡುತ್ತಿದೆ” ಎಂದು ತಿಳಿಸಿದ್ದಾರೆ.

ಇದೇ ವೇಳೆ ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಸಹ ಅಭಿನಂದನೆ ಸಲ್ಲಿಸಿ, “ದಶಕಗಳ ಕಾಲದ ವೃತ್ತಿಜೀವನದಲ್ಲಿ ಮೋಹನ್ ಲಾಲ್ ಅವರು ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಚಿತ್ರಗಳಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಕೇರಳದ ಸಂಸ್ಕೃತಿಯ ಬಗ್ಗೆ ಅವರ ಅಭಿರುಚಿ ಹಾಗೂ ವಿಭಿನ್ನ ಮಾಧ್ಯಮಗಳಲ್ಲಿ ತೋರಿದ ಪಾಂಡಿತ್ಯವು ಲಕ್ಷಾಂತರ ಜನರಿಗೆ ಸ್ಪೂರ್ತಿ ನೀಡಿದೆ. ಈ ಪ್ರಶಸ್ತಿ ಅವರಿಗೆ ಮಾತ್ರವಲ್ಲ, ಸಂಪೂರ್ಣ ಮಲಯಾಳಂ ಚಿತ್ರೋದ್ಯಮಕ್ಕೂ ಸಲ್ಲುತ್ತದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ