Sunday, September 21, 2025

ಕರ್ನಾಟಕದಲ್ಲಿ ನಾಳೆಯಿಂದಲೇ ಹಿಂದುಳಿದ ಆಯೋಗದಿಂದ ಸಮೀಕ್ಷೆ ಪ್ರಾರಂಭ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸರ್ಕಾರ ನಾಳೆಯಿಂದ (ಸೋಮವಾರ) ಇಡೀ ರಾಜ್ಯದಲ್ಲಿ ಹೊಸ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಆರಂಭಿಸಲು ಸಿದ್ಧವಾಗಿದೆ. ಹಿಂದುಳಿದ ಆಯೋಗದ ಮೂಲಕ ಮನೆಮನೆ ಭೇಟಿ ನೀಡುವ ಮೂಲಕ ಸಮೀಕ್ಷೆ ನಡೆಸಲಾಗುವುದು. ಈ ಸಮೀಕ್ಷೆಯು ರಾಜ್ಯದ ಜನಸಂಖ್ಯೆಯ ಶೈಕ್ಷಣಿಕ, ಆರ್ಥಿಕ ಪರಿಸ್ಥಿತಿ ಹಾಗೂ ಜಾತಿ-ಉಪಜಾತಿ ಮಾಹಿತಿಗಳನ್ನು ಸಂಗ್ರಹಿಸುವಲ್ಲಿ ಮಹತ್ವಪೂರ್ಣ ಪಾತ್ರವಹಿಸಲಿದೆ.

ಹಿಂದುಳಿದ ಆಯೋಗದ ಸಿಬ್ಬಂದಿ ಹಾಗೂ ಶಿಕ್ಷಕರು, ಕಂದಾಯ ಇಲಾಖೆ ಮತ್ತು ಆಶಾ ಕಾರ್ಯಕರ್ತೆಯರಿಗೆ ಸಂಪೂರ್ಣ ಡಿಜಿಟಲ್ ಮಾದರಿಯಲ್ಲಿ ಸಮೀಕ್ಷೆ ನಡೆಸುವ ತರಬೇತಿ ನೀಡಲಾಗಿದೆ. ಸಾರ್ವಜನಿಕರು ಸಹ ಸಮೀಕ್ಷೆ ವೇಳೆ ತಮ್ಮ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕಾಗಿದ್ದು, ಅದರಿಂದ ಯಾವುದೇ ಗೊಂದಲ ಅಥವಾ ತಡವಣೆ ತಪ್ಪಿಸಲಾಗುವುದು.

ಸಮೀಕ್ಷೆಗೆ ಬೇಕಾಗುವ ದಾಖಲೆಗಳು:

ಆಧಾರ್ ಕಾರ್ಡ್
ರೇಷನ್ ಕಾರ್ಡ್
ವೋಟರ್ ಐಡಿ ಕಾರ್ಡ್
ವಿದ್ಯಾಭ್ಯಾಸದ ಅಂಕಪಟ್ಟಿ

ಸಮೀಕ್ಷೆ ವೇಳೆ, ಕುಟುಂಬದ ಎಲ್ಲಾ ಸದಸ್ಯರ ಧರ್ಮ, ಜಾತಿ, ಉಪಜಾತಿ, ಶೈಕ್ಷಣಿಕ ಮಟ್ಟ ಮತ್ತು ಆಸ್ತಿ ವಿವರಗಳನ್ನು ನೀಡಬೇಕು. ಆಧಾರ್ ಕಾರ್ಡ್ ನೊಂದಾಯಿತ ನಂಬರ್‌ನಲ್ಲಿ ಕೆವೈಸಿ ಸಹ ಗುರುತಿಸಲಾಗುತ್ತದೆ.

ಅಕ್ಟೋಬರ್ 7ರವರೆಗೆ ನಡೆಯುವ ಈ ಸಮೀಕ್ಷೆಗೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕಾಗಿದೆ. ಮನೆಗೆ ಬರುವ ಸಮೀಕ್ಷೆ ಸಿಬ್ಬಂದಿ ಜೊತೆ ಸಕಾಲಿಕ ಮಾಹಿತಿಯನ್ನು ಹಂಚಿಕೊಳ್ಳುವುದರಿಂದ ಸಮೀಕ್ಷೆ ಸುಗಮವಾಗಿ ಮತ್ತು ಪರಿಣಾಮಕಾರಿಯಾಗಿ ಪೂರ್ಣಗೊಳ್ಳಲಿದೆ. ಈ ಸಮೀಕ್ಷೆಯಿಂದ ರಾಜ್ಯದ ಶೈಕ್ಷಣಿಕ ಮತ್ತು ಆರ್ಥಿಕ ಯೋಜನೆಗಳನ್ನು ಸುಧಾರಿಸಲು ಹಾಗೂ ಜನರ ಅಗತ್ಯಗಳಿಗೆ ತಕ್ಕಂತೆ ನೀತಿ ರೂಪಿಸಲು ಮಹತ್ವದ ಮಾಹಿತಿಗಳು ಲಭ್ಯವಾಗಲಿದೆ.

ಇದನ್ನೂ ಓದಿ