ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಮೊಗ್ಗ ಜಿಲ್ಲೆಯ ಸಾಗರ ರಸ್ತೆಯಲ್ಲಿರುವ ಪ್ರೇರಣಾ ಸಭಾಂಗಣದಲ್ಲಿ ನಡೆದ ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘ ನಿಯಮಿತದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಅಡಕೆ ಬೆಳೆ ಮಲೆನಾಡಿನ ಆರ್ಥಿಕ ಶಕ್ತಿ ಮಾತ್ರವಲ್ಲದೆ, ಧಾರ್ಮಿಕ ಸಂಕೇತವೂ ಆಗಿದೆ ಎಂದು ಹೇಳಿದರು.
ಮಲೆನಾಡಿನ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆ ಬೆಳೆದಿದ್ದು, ದೇಶದ ಅತಿ ದೊಡ್ಡ ಅಡಕೆ ಉತ್ಪಾದನಾ ಪ್ರದೇಶವಾಗಿ ಮಲೆನಾಡು ಗುರುತಿಸಿಕೊಂಡಿದೆ ಎಂದು ಅವರು ಅಭಿಮಾನದೊಂದಿಗೆ ವಿವರಿಸಿದರು. ಇದು ರಾಜ್ಯ ಹಾಗೂ ದೇಶದ ಆರ್ಥಿಕತೆಗೆ ಮಹತ್ತರ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.
ಅಡಿಕೆ ಬೆಳೆಯುವ ಸಣ್ಣ ರೈತರಿಗೆ ಸಹಕಾರ ಸಂಘಗಳು ಅವಶ್ಯಕ ಸಮಯದಲ್ಲಿ ಆರ್ಥಿಕ ನೆರವು ನೀಡುತ್ತಿದ್ದು, ಸ್ವಾವಲಂಬಿ ಜೀವನ ಸಾಗಿಸಲು ಬಲವಾಗಿ ನಿಂತಿವೆ. ಕೊಳೆ ರೋಗ ಸೇರಿದಂತೆ ಸಂಕಷ್ಟದ ಸಂದರ್ಭಗಳಲ್ಲಿ ರೈತರ ಜೊತೆ ನಿಂತಿರುವ ಸಹಕಾರ ಸಂಘಗಳ ಕಾರ್ಯ ಮಾದರಿಯಾಗಿದೆ ಎಂದು ಸಂಸದರು ಪ್ರಶಂಸಿಸಿದರು.
ಕೇಂದ್ರ ಸರ್ಕಾರ ಅಡಿಕೆ ರೈತರಿಗೆ ಉತ್ತೇಜನ ನೀಡುವ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದೆ. ಹೊಸ ಸಂಶೋಧನೆಗಳಿಗೆ ಅನುದಾನ ನೀಡುತ್ತಿರುವುದರ ಜೊತೆಗೆ, ಬೆಳೆ ನಷ್ಟದ ಸಂದರ್ಭಗಳಲ್ಲಿ ಪರಿಹಾರ ನೀಡುವುದರ ಮೂಲಕ ರೈತರಿಗೆ ಆತ್ಮಸ್ಥೈರ್ಯ ತುಂಬುತ್ತಿದೆ ಎಂದು ರಾಘವೇಂದ್ರ ಹೇಳಿದರು.
ಅಡಿಕೆ ಕೇವಲ ಆರ್ಥಿಕ ಬೆಳೆಯಾಗಿ ಮಾತ್ರವಲ್ಲದೆ, ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಇದು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವುದರಿಂದ, ಅಡಿಕೆಯನ್ನು ಕುರಿತು ಹೆಮ್ಮೆಪಡುವಂತಾಗಿದೆ ಎಂದು ಸಂಸದರು ಹೇಳಿದರು.