ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದ ಅಭಯಪುರ ಗ್ರಾಮದ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್ ಪಲ್ಟಿಯಾಗಿ ದುರಂತ ಸಂಭವಿಸಿದೆ. ಬೆಳಗಿನ ಜಾವ ನಡೆದ ಈ ಅಪಘಾತದಲ್ಲಿ 28 ವರ್ಷದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, 24 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತ ಆಗ್ರಾ–ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗ್ಗೆ 4 ಗಂಟೆ ಸುಮಾರಿಗೆ ನಡೆದಿದೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಗುಜರಾತ್‌ನ ಜಾಮ್‌ನಗರದಿಂದ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಮೂಲದ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್, ವೇಗ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ಅಕ್ಬರ್‌ಪುರದ ನಿವಾಸಿ ಗಾಯತ್ರಿ ಬಾಯಿ (28) ಮೃತಪಟ್ಟಿದ್ದು, ಗಾಯಗೊಂಡವರನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಕೆಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಇತರ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ.
ಪೊಲೀಸರು ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿಸಿದ್ದಾರೆ. ಅತಿ ವೇಗದಲ್ಲಿ ಚಲಾಯಿಸುತ್ತಿದ್ದಾಗ ಚಾಲಕ ನಿಯಂತ್ರಣ ಕಳೆದುಕೊಂಡಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ಚಾಲಕನ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ.
ಮಾಹಿತಿ ಸಿಕ್ಕ ತಕ್ಷಣ ಪೊಲೀಸರು, ಸಂಚಾರ ಇಲಾಖೆ ಹಾಗೂ ಆಂಬ್ಯುಲೆನ್ಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಕೈಗೊಂಡರು. ಸ್ಥಳೀಯರೂ ಸಹ ಗಾಯಾಳುಗಳ ನೆರವಿಗೆ ಧಾವಿಸಿದ್ದು, ಬಸ್ ನೋಂದಣಿ ಮತ್ತು ಪ್ರಯಾಣಿಕರ ಪಟ್ಟಿಯನ್ನು ಪರಿಶೀಲಿಸಿ ಕುಟುಂಬಗಳಿಗೆ ಮಾಹಿತಿ ನೀಡುವ ಕಾರ್ಯ ಮುಂದುವರಿದಿದೆ.