Sunday, September 21, 2025

ಜಾತಿ ಗಣತಿ ಹೆಸರಿನಲ್ಲಿ ಹಿಂದು ಧರ್ಮವನ್ನು ಒಡೆಯುವ ಕೆಲಸ: ಸಿಎಂ ಸಿದ್ದರಾಮಯ್ಯ ವಿರುದ್ಧ ಬಿ.ವೈ. ವಿಜಯೇಂದ್ರ ಕಿಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಾತಿ ಗಣತಿ ಹೆಸರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಹಿಂದು ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಆರೋಪಿಸಿದ್ದಾರೆ.

ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಈ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಯಾಕೆ ಇಂತಹ ದುರ್ಬುದ್ಧಿ ಬಂದಿದೆಯೋ?. ಯಾಕೆ ಇಂತಹ ವಿಕೃತ ಮನಸ್ಸಿನಿಂದ ಇವತ್ತು ರಾಜ್ಯವನ್ನು ಒಡೆಯುವಂತಹ ಕೆಲಸಕ್ಕೆ ಕೈ ಹಾಕಿದ್ದಾರೋ ಎಂದು ರಾಜ್ಯದ ಜನತೆ ಇವತ್ತು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ರಾಜ್ಯದ ಸಿಎಂ ಆದವರು ರಾಜ್ಯದ ಅಭಿವೃದ್ದಿಗೆ ಗಮನ ಕೊಡದೆ, ರಾಜ್ಯವನ್ನು ಒಡೆಯುವಂತಹ ಕೆಲಸ ಮಾಡುತ್ತಿದ್ದಾರೆ. ಇವತ್ತು ಬ್ರಿಟಿಷ್ ಹಾಗೂ ಟಿಪ್ಪು, ನಿಜಾಮರ ಆಳ್ವಿಕೆಯನ್ನು ನಾಚಿಸುವಂತೆ ಆಡಳಿತ ನಡೆಸುತ್ತಿದ್ದಾರೆ. ಧರ್ಮೋ ರಕ್ಷತಿ ರಕ್ಷಿತಃ ಎಂಬಂತೆ ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮ ರಕ್ಷಿಸುತ್ತದೆ ಎಂದು ಹೇಳುತ್ತಾರೆ. ಆದರೆ ಸಿದ್ದರಾಮಯ್ಯ ಸರ್ಕಾರ ಹಿಂದು ಸಮಾಜವನ್ನು ಒಡೆಯುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಇದರಿಂದ ಖಂಡಿತ ಭಗವಂತ ಒಳ್ಳೆಯದನ್ನು ಮಾಡಲ್ಲ ಎಂದರು.

ರಾಜ್ಯ ಸರ್ಕಾರಕ್ಕೆ ರಾಜ್ಯದ ಜನ ಶಾಪವನ್ನು ಹಾಕುತ್ತಿದ್ದಾರೆ. ಮುಂದೊಂದು ದಿನ ಜನ ಬುದ್ಧಿ ಕಲಿಸುವಂತಹ ಕೆಲಸ ಮಾಡುತ್ತಾರೆ. ನಾನು ಎಲ್ಲಾ ಸಮಾಜದವರಿಗೆ ಕೈ ಮುಗಿದು ಬೇಡಿಕೊಳ್ಳುತ್ತೇನೆ. ಇವರ ಷಡ್ಯಂತ್ರಕ್ಕೆ ಬಲಿ ಆಗುವುದು ಬೇಡ. ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ ಮಾಡುವ ಅಧಿಕಾರ ಇಲ್ಲ. ನಾವೆಲ್ಲರೂ ಧರ್ಮದ ಕಾಲಂನಲ್ಲಿ ಹಿಂದು ಎಂದು ಬರೆಯಿಸಬೇಕು ಎಂದು ಕರೆ ನೀಡಿದರು.

ವೋಟ್ ಚೋರಿ ಅಲ್ಲ, ದೇಶದ ಜನ ಕಾಂಗ್ರೆಸ್​ ಪಕ್ಷದ ಬಗ್ಗೆ ಯಾಕೆ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಆಲೋಚನೆ ಮಾಡಬೇಕು. ವೋಟ್ ಚೋರಿ ಬಗ್ಗೆ ಮಾತನಾಡುವ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್​​​ ಅವರು ದೇಶದ ಜನತೆಗೆ ಅಪಮಾನ ಮಾಡುತ್ತಿದ್ದಾರೆ. ದೇಶದ ಜನ ಸ್ಪಷ್ಟವಾಗಿ ಬಯಸಿರುವಂತದ್ದು ನರೇಂದ್ರ ಮೋದಿ ಅವರ ನಾಯಕತ್ವ. ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿ ಅಧಿಕಾರದಲ್ಲಿದ್ದಾರೆ. ಕಾಂಗ್ರೆಸ್​ ದೇಶದ ಆಡಳಿತ ನಡೆಸಿದಾಗ ದೇಶದ ಅಭಿವದ್ಧಿಯ ಬಗ್ಗೆ ಗಮನ ಹರಿಸಿದ್ದಾರೆಯೇ ಎಂದು ಪ್ರಶ್ನಿಸಿದ್ದರು. ಸೆಪ್ಟಂಬರ್ 24ಕ್ಕೆ ರಾಜ್ಯಾದ್ಯಂತ ಬೆಳಗ್ಗೆ 11 ಗಂಟೆಗೆ ರಸ್ತೆ ತಡೆ ಚಳವಳಿ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ