Sunday, September 21, 2025

ದೇಶಾದ್ಯಂತ SIR ನಡೆಸಲು ರೆಡಿ: ರಾಜ್ಯಗಳಿಗೆ ಸೆಪ್ಟೆಂಬರ್ 30 ಗಡುವು ನೀಡಿದ ಚುನಾವಣಾ ಆಯೋಗ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶಾದ್ಯಂತ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು (SIR) ಚುನಾವಣಾ ಆಯೋಗ ಕೈಗೊಳ್ಳುತ್ತಿದೆ. ಇದಕ್ಕಾಗಿ ಸೆ.30 ರೊಳಗೆ ಸಜ್ಜಾಗಿ ಎಂದು ರಾಜ್ಯ ಚುನಾವಣಾ ಅಧಿಕಾರಿಗಳಿಗೆ ಕೇಂದ್ರ ಚುನಾವಣಾ ಆಯೋಗ ಸೂಚಿಸಿದೆ.

ದೆಹಲಿಯಲ್ಲಿ ನಡೆದ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳ (CEO) ಸಮ್ಮೇಳನದಲ್ಲಿ, ಮುಂದಿನ 10 ರಿಂದ 15 ದಿನಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR)ಗೆ ಸಿದ್ಧರಾಗಿ ಎಂದು ಚುನಾವಣಾ ಆಯೋಗದ ಮುಖ್ಯಸ್ಥರು ಸೂಚಿಸಿದ್ದಾರೆ.

ಸೆಪ್ಟೆಂಬರ್ 30 ರ ಗಡುವನ್ನು ನಿಗದಿಪಡಿಸಲಾಗಿದೆ. ಕಳೆದ SIR ನಂತರ ಪ್ರಕಟಿಸಲಾದ ತಮ್ಮ ರಾಜ್ಯಗಳ ಮತದಾರರ ಪಟ್ಟಿಯನ್ನು ಸಿದ್ಧವಾಗಿಟ್ಟುಕೊಳ್ಳಲು ಸಿಇಒಗಳಿಗೆ ತಿಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಲವು ರಾಜ್ಯಗಳ ಸಿಇಒಗಳು ತಮ್ಮ ಕೊನೆಯ SIR ನಂತರ ಮತದಾರರ ಪಟ್ಟಿಯನ್ನು ಈಗಾಗಲೇ ತಮ್ಮ ವೆಬ್ ಸೈಟ್ ಗಳಲ್ಲಿ ಪ್ರಕಟಿಸಿದ್ದಾರೆ. ದೆಹಲಿ ಸಿಇಒ ಅವರ ವೆಬ್‌ಸೈಟ್ 2008 ರ ಮತದಾರರ ಪಟ್ಟಿಯನ್ನು ಹೊಂದಿದೆ. ಉತ್ತರಾಖಂಡದಲ್ಲಿ 2006ರಲ್ಲಿ ಕೊನೆಯದಾಗಿ ಎಸ್‌ಐಆರ್‌ ನಡೆದಿದ್ದು, ಆ ವರ್ಷದ ಮತದಾರರ ಪಟ್ಟಿ ಈಗ ರಾಜ್ಯ ಸಿಇಒ ವೆಬ್‌ಸೈಟ್‌ನಲ್ಲಿದೆ. ಬಿಹಾರದ 2003 ರ ಮತದಾರರ ಪಟ್ಟಿಯನ್ನು ತೀವ್ರ ಪರಿಷ್ಕರಣೆಗಾಗಿ EC ಬಳಸುತ್ತಿದೆ.

ಹೆಚ್ಚಿನ ರಾಜ್ಯಗಳು 2002 ಮತ್ತು 2004 ರ ನಡುವೆ ಕೊನೆಯ SIR ಹೊಂದಿವೆ. ಬಿಹಾರದ ನಂತರ ಇಡೀ ದೇಶದಲ್ಲಿ SIR ನಡೆಸಲಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ. 2026 ರಲ್ಲಿ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ.

ಇದನ್ನೂ ಓದಿ