ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುನಿರೀಕ್ಷಿತ ʼಕಾಂತಾರ: ಚಾಪ್ಟರ್ 1ʼ ಚಿತ್ರದ ಟ್ರೈಲರ್ ರಿಲೀಸ್‌ಗೆ ಕ್ಷಣಗಣನೆ ಆರಂಭವಾಗಿದೆ . ನವರಾತ್ರಿಯ ಮೊದಲ ದಿನವಾದ ಸೆಪ್ಟೆಂಬರ್ 22ರ ಮಧ್ಯಾಹ್ನ 12:45ಕ್ಕೆ ವಿವಿಧ ಭಾಷೆಗಳಲ್ಲಿ ಏಕಕಾಲಕ್ಕೆ ಟ್ರೈಲರ್ ಬಿಡುಗಡೆಯಾಗಲಿದೆ.
ಕನ್ನಡ ಹೊರತುಪಡಿಸಿ ಉಳಿದ ಭಾಷೆಗಳ ಟ್ರೈಲರ್ ಆಯಾ ಭಾಷೆಗಳ ಸೂಪರ್ ಸ್ಟಾರ್‌ಗಳು ಅನಾವರಣಗೊಳಿಸಿದ್ದಾರೆ. ಕನ್ನಡ ಟ್ರೈಲರ್ ಅನ್ನು ಕನ್ನಡ ಜನತೆಯೇ ಬಿಡುಗಡೆ ಮಾಡಲಿದ್ದಾರೆ.
ಹೌದು, ಇದೀಗ ಚಿತ್ರತಂಡ ಪ್ರೇಕ್ಷಕರಿಗೆ ಸುವರ್ಣಾವಕಾಶ ನೀಡಿದೆ. ವಿಶೇಷ ಎಂದರೆ ನೀವೂ ಟ್ರೈಲರ್ ರಿಲೀಸ್ ಮಾಡಬಹುದು. ಈ ಬಗ್ಗೆ ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಪ್ರಕಟಿಸಿದೆ. ಇದಕ್ಕಾಗಿ ನೀವೇನು ಮಾಡಬೇಕು ಎನ್ನುವುದನ್ನೂ ತಿಳಿಸಿದೆ.
ʼʼಕನ್ನಡ ಜನತೆಗೆ ನಮಸ್ಕಾರ. ‘ಕಾಂತಾರ: ಚಾಪ್ಟರ್ 1’ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲು ಇದೊಂದು ಅಪ್ಪಟ ಸುವರ್ಣಾವಕಾಶʼʼ ಎಂದು ಬರೆದುಕೊಂಡಿರುವ ಚಿತ್ರತಂಡ ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ನೀಡಿದೆ.
ಮೊದಲಿಗೆ https://kantara.world ವೆಬ್‌ಸೈಟ್‌ಗೆ ಭೇಟಿ ನೀಡಿ.
ಬಳಿಕ ಅಲ್ಲಿ ನಿಮ್ಮ ಮಾಹಿತಿಯನ್ನು ನಮೂದಿಸಿ.
ನಂತರ ನೀವು ನಿಮ್ಮ ಹೆಸರಿನಲ್ಲಿರುವ ವಿಶೇಷ ಟ್ರೈಲರ್ ಬಿಡುಗಡೆ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ ಹಾಗೂ ಅದನ್ನು ಎಲ್ಲರೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ.
ಟ್ರೈಲರ್ ಬಿಡುಗಡೆ ಮಾಡಲು ಸೆಪ್ಟೆಂಬರ್ 22ರ ಮಧ್ಯಾಹ್ನ 12:35ಕ್ಕೆ ವೆಬ್‌ಸೈಟ್‌ಗೆ ಭೇಟಿ ನೀಡಿ.
ಸದ್ಯ ಈ ವಿಚಾರ ತಿಳಿದು ಅಭಿಮಾನಿಗಳು ಥ್ರಿಲ್ ಆಗಿದ್ದು, ಬಹುನಿರೀಕ್ಷಿತ ಸಿನಿಮಾದ ಭಾಗವಾಗಲು ತುದಿಗಾಲಿನಲ್ಲಿ ನಿಂತಿದ್ದಾರೆ.


ಕೆಲವು ತಿಂಗಳ ಹಿಂದೆಯೇ ಹೊಂಬಾಳೆ ಫಿಲ್ಮ್ಸ್ ಬಿಡುಗಡೆ ದಿನಾಂಕ ಘೋಷಿಸಿದ್ದರೂ ಚಿತ್ರದ ಬಗ್ಗೆ ಹೆಚ್ಚಿನ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಬೆರಳೆಣಿಕೆಯ ಪೋಸ್ಟರ್, ಮೇಕಿಂಗ್ ವಿಡಿಯೊ ಹರಿಯಬಿಟ್ಟಿದ್ದು ಬಿಟ್ಟರೆ ರಹಸ್ಯ ಬಹಿರಂಗಪಡಿಸಿರಲಿಲ್ಲ. ಶೂಟಿಂಗ್ ವೇಳೆಯೂ ಚಿಕ್ಕ ಮಾಹಿತಿಯೂ ಹೊರಬಾರದಂತೆ ಎಚ್ಚರಿಕೆ ವಹಿಸಿ ಕುತೂಹಲ ಕಾಯ್ದುಕೊಂಡಿತ್ತು.