Monday, September 22, 2025

ಭಾರತ-ಪಾಕಿಸ್ತಾನ್ ಪಂದ್ಯ| ಶೇಕ್​ಹ್ಯಾಂಡ್ ಮಾಡಿ ಎಂದ ಗಂಭೀರ್: ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚಿನ ಏಷ್ಯಾ ಕಪ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳ ನಡುವೆ ನಡೆದ ಶೇಕ್‌ಹ್ಯಾಂಡ್ ವಿವಾದ ಸಾಮಾಜಿಕ ಮಾಧ್ಯಮದಲ್ಲಿ ಗಮನಸೆಳೆಯುತ್ತಿದೆ. ಸೆಪ್ಟೆಂಬರ್ 14 ರಂದು ನಡೆದ ಪಂದ್ಯದ ಬಳಿಕ ಟೀಮ್ ಇಂಡಿಯಾ ಆಟಗಾರರು ಪಾಕಿಸ್ತಾನ್ ಆಟಗಾರರೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಿದ್ದರು. ಈ ನಡವಳಿಕೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಆಕ್ರೋಶಕ್ಕೆ ಕಾರಣವಾಯಿತು. ಅಷ್ಟೇ ಅಲ್ಲದೆ ಟೂರ್ನಿಯಿಂದ ಹಿಂದೆ ಸರಿಯುವ ಗೊಡ್ಡು ಬೆದರಿಕೆಯೊಡ್ಡಿದ್ದರು.

ಆದರೆ, ಸೆಪ್ಟೆಂಬರ್ 21 ರಂದು ದುಬೈನಲ್ಲಿ ನಡೆದ 2ನೇ ಪಂದ್ಯದಲ್ಲಿಯೂ ಟೀಮ್ ಇಂಡಿಯಾ ಆಟಗಾರರು ಪಾಕಿಸ್ತಾನ್ ಆಟಗಾರರಿಗೆ ಶೇಕ್‌ಹ್ಯಾಂಡ್ ನೀಡದೆ ಡ್ರೆಸ್ಸಿಂಗ್ ರೂಮ್ ಗೆ ತೆರಳಿದರು. ಈ ಸಂದರ್ಭ ಕೋಚ್ ಗೌತಮ್ ಗಂಭೀರ್ ಭಾರತೀಯ ಆಟಗಾರರಿಗೆ ಶಿಷ್ಟಾಚಾರ ಪಾಲಿಸಲು ಸೂಚಿಸಿದ್ದರು. ಟೀಮ್ ಇಂಡಿಯಾ ಆಟಗಾರರು ಅವರ ಸಲಹೆಯನ್ನು ಅನುಸರಿಸಿ ಡ್ರೆಸ್ಸಿಂಗ್ ರೂಮ್‌ನಿಂದ ಹಿಂತಿರುಗಿ ಅಂಪೈರ್‌ಗಳಿಗೆ ಕೈ ಕುಲುಕಿದರು. ಈ ಕ್ಷಣದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸಾಕಷ್ಟು ಚರ್ಚೆ ಹುಟ್ಟಿಸಿದೆ.

ಮ್ಯಾಚ್‌ನಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ದುಕೊಂಡಿದ್ದರು. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 20 ಓವರ್‌ನಲ್ಲಿ 5 ವಿಕೆಟ್ ಕಳೆದುಕೊಂಡು 171 ರನ್ ಸಾಧಿಸಿತು. ಟಾರ್ಗೆಟ್ 172 ರನ್ ಪಡೆದ ಭಾರತ ತಂಡದಲ್ಲಿ ಅಭಿಷೇಕ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಸ್ಫೋಟಕ ಆರಂಭ ನೀಡಿದರು. 105 ರನ್ ಜೊತೆಯಾಟದ ಬಳಿಕ ಶುಭ್ಮನ್ ಗಿಲ್ (47) ವಿಕೆಟ್ ಕೊಟ್ಟರೂ, ಅಭಿಷೇಕ್ ಶರ್ಮಾ 39 ಎಸೆತಗಳಲ್ಲಿ 5 ಸಿಕ್ಸ್ ಮತ್ತು 6 ಫೋರ್ಗಳೊಂದಿಗೆ 74 ರನ್ ಸಿಡಿಸಿ ತಂಡಕ್ಕೆ 18.5 ಓವರ್‌ನಲ್ಲಿ 6 ವಿಕೆಟ್ಗಳ ಭರ್ಜರಿ ಜಯ ತಂದುಕೊಟ್ಟರು.

ಇದನ್ನೂ ಓದಿ