ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ರೋಡ್ ಶೋ ನಡೆಸಿದರು.
ಈ ವೇಳೆ ಪ್ರಧಾನಿಯನ್ನು ಸ್ವಾಗತಿಸಲು ಜನರು ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದರು.ತ್ರಿವರ್ಣ ಧ್ವಜವನ್ನು ಬೀಸುತ್ತಾ ವಂದೇ ಮಾತರಂ ಘೋಷಣೆಗಳನ್ನು ಕೂಗಿದರು.

ಅನೇಕ ಮಹಿಳೆಯರು ಅರುಣಾಚಲ ಪ್ರದೇಶದ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿದ್ದರು.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಇಂದು ಬೆಳಿಗ್ಗೆ ಇಟಾನಗರದಲ್ಲಿ ನಿಜವಾಗಿಯೂ ಸ್ಮರಣೀಯ ಸ್ವಾಗತ ದೊರೆಯಿತು. ಅಲ್ಲಿನ ವಾತಾವರಣ ಮೈ ರೋಮಾಂಚನಗೊಳಿಸುವಂತಿತ್ತು. ವಂದೇ ಮಾತರಂ ಘೋಷಣೆಗಳು, ನಾರಿ ಶಕ್ತಿ ಹಾಗೂ ಯುವ ಶಕ್ತಿಯ ಸಂಕೇತವಾಗಿ ಸೇರಿದ್ದ ಜನರನ್ನು ಕಂಡು ಬಹಳ ಸಂತೋಷವಾಯಿತು. ಅರುಣಾಚಲ ಪ್ರದೇಶದ ಜನರ ಉತ್ಸಾಹ ಅಸಾಧಾರಣವಾದುದು ಎಂದು ಬಣ್ಣಿಸಿದ್ದಾರೆ.

ಪ್ರಧಾನಿ ಮೋದಿ ಇಂದು ಅರುಣಾಚಲ ಪ್ರದೇಶದ ಇಟಾನಗರದಲ್ಲಿ 5,100 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
