ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಪಘಾತಕ್ಕೀಡಾಗಿ ಕಾಲನ್ನು ಕಳೆದುಕೊಂಡು ಮನೆಯಲ್ಲಿಯೇ ತೆವಳಿಕೊಂಡಿರುವ ತಂದೆ, ಎರಡೂ ಕಿಡ್ನಿಗಳನ್ನು ಕಳೆದುಕೊಂಡು ದುಡಿಯಲಾಗದೆ ದಿಕ್ಕುತೋಚದೆ ಕುಳಿತ ಮಗ. ಒಂದು ಕಡೆ ಹೊಟ್ಟೆ ಹೊರೆಯಬೇಕು, ಇನ್ನೊಂದು ಕಡೆ ಔಷಧಿಗೆ ಹಣ ಹೊಂದಿಸಬೇಕು. ಇನ್ನೊಬ್ಬ ಮಗನ ದುಡಿಮೆಯೇ ಕುಟುಂಬಕ್ಕೆ ಆಧಾರ. ಇದನ್ನೆಲ್ಲಾ ನೋಡಿ ಅಸಹಾಯಕನಾದ ತಂದೆ ಇದೀಗ ಭಿಕ್ಷೆ ಬೇಡುತ್ತಿದ್ದಾರೆ.
ಇದು ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರ ಮೂಳೂರು ಗ್ರಾಮದ ಮಠದ ಗುಡ್ಡೆ ನಿವಾಸಿ ಡೊನಾಲ್ಡ್ ಡೆಂಝಿಲ್ ಮಸ್ಕರೆನ್ಹಸ್(32) ಕುಟುಂಬದ ಕರುಣಾಜನಕ ಸ್ಥಿತಿ.
ಡೊನಾಲ್ಡ್ ಅವರು ಮಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಲೋಡಿಂಗ್ ಕೆಲಸ ಮಾಡುತ್ತಿದ್ದರು. ಶ್ರಮಜೀವಿಯಾಗಿದ್ದ ಇವರು ಇಡೀ ಕುಟುಂಬವನ್ನು ಸಾಕುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಅವರು ಅಸೌಖ್ಯಕ್ಕೀಡಾದರು. ಚಿಕಿತ್ಸೆ ಪಡೆಯುತ್ತಿದ್ದರೂ ಖಾಯಿಲೆ ಉಲ್ಬಣಗೊಂಡಾಗ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿದರು. ಆಗ ಇವರ ಎರಡೂ ಕಿಡ್ನಿಗಳು ವಿಫಲಗೊಂಡಿರುವುದು ಪತ್ತೆಯಾಯಿತು. ಚಿಕಿತ್ಸೆಗಾಗಿ ನಾಲ್ಕೈದು ಲಕ್ಷ ಖರ್ಚು ಮಾಡಿದ್ದು, ಇದೀಗ ಡಯಾಲಿಸ್‌ಗಾಗಿ ಹಣ ಹೊಂದಿಸುವುದೇ ಕಷ್ಟವಾಗಿದೆ.
ಇನ್ನೊಂದು ಕಡೆ ಡೊನಾಲ್ಡ್ ಅವರ ತಂದೆ ಡೆಂಝಿಲ್ ಮಸ್ಕರನ್ಹಸ್ ಅವರಿಗೆ ಕೆಲವು ವರ್ಷಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ಕಾಲನ್ನೇ ಕಳೆದುಕೊಂಡಿದ್ದಾರೆ. ಇವರಿಗೂ ಸಾಕಷ್ಟು ಹಣ ಖರ್ಚಾಗಿದೆ. ಪುತ್ರ ಡೊನಾಲ್ಡ್ ಹಾಗೂ ಇನ್ನೊಬ್ಬ ಮಗ ತಂದೆ ಚಿಕಿತ್ಸೆಯ ಖರ್ಚು, ಮನೆಯನ್ನು ಸಂಬಾಳಿಸಿಕೊಂಡು ಹೋಗುತ್ತಿದ್ದರು. ಆದರೆ ಇದೀಗ ಡೊನಾಲ್ಡ್ ಅವರೂ ಎರಡೂ ಕಿಡ್ನಿ ಕಳೆದುಕೊಂಡಿರುವುದರಿಂದ ಮನೆಯನ್ನು ನೋಡಿಕೊಳ್ಳುವುದು, ಚಿಕಿತ್ಸೆಗೆ ಹಣ ಹೊಂದಿಸಲು ಪರದಾಡುವಂತಾಗಿದೆ. ಡೊನಾಲ್ಡ್ ಅವರ ಸಹೋದರ ಖಾಸಗಿ ಆಸ್ಪತ್ರೆಯೊಂದರಲ್ಲಿ ಪುಟ್ಟ ಸಂಬಳದಲ್ಲಿ ಕೆಲಸ ಮಾಡುತ್ತಿದ್ದು, ಇದೀಗ ಇವರೊಬ್ಬರೇ ಮನೆಯ ಆಧಾರವಾಗಿದ್ದಾರೆ. ತಾಯಿ ಮಗ್ದಲೀನ್ ಮಸ್ಕರೆನ್ಹಸ್ ಅವರಿಗೆ ಮಗ, ಗಂಡನನ್ನು ನೋಡಿಕೊಳ್ಳುವ ನಡುವೆ ಬೇರೆ ಯಾವುದೇ ಕೆಲಸ ಮಾಡಲು ಸಮಯ ಸಿಗುತ್ತಿಲ್ಲ.ಇದನ್ನೆಲ್ಲಾ ನೋಡಿ ಅಸಹಾಯಕನಾದ ತಂದೆ ಗುರುಪುರ ಕೈಕಂಬ ಪರಿಸರದಲ್ಲಿ ಕೈ ಚಾಚುವ ಪರಿಸ್ಥಿತಿಗೆ ಬಂದಿದ್ದಾರೆ. ಯಾರದರೂ ಕನಿಕರದಿಂದ ಹತ್ತೋ-ಇಪ್ಪತ್ತೋ ಹಾಕಿದರಷ್ಟೇ ಚಿಕಿತ್ಸೆ, ಮನೆ ಖರ್ಚು ನಡೆಯುತ್ತದೆ ಎಂದು ಕಣ್ಣೀರು ಹಾಕುತ್ತಿದ್ದಾರೆ.
ದಿಕ್ಕುತೋಚದ ಡೊನಾಲ್ಡ್ ಕುಟುಂಬಿಕರು ಸಹಾಯಕ್ಕಾಗಿ ಸಹೃದಯಿಗಳ ಸಹಾಯಹಸ್ತ ಬಯಸುತ್ತಿದ್ದಾರೆ.
Bank Details
Name: Donald Denzil Mascarenhas
Bank Account No: 110062869351
Bank Name: Canara Bank
Branch: Kuntikan
IFSC Code: CNRB0000178
Mob/Gpay: 7349661868
Adress: 6-314/31 Mattada gudde Muluru Villagȩ Gurupura Post Mangalore -574145