Tuesday, September 23, 2025

ನಮ್ಮ ಈ ಸಣ್ಣ ತಪ್ಪುಗಳಿಂದಲೇ ಸೈಬರ್‌ ಖದೀಮರಿಗೆ ದುಡ್ಡು ಹೋಗೋದು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆನ್‌ಲೈನ್‌ ವಹಿವಾಟುಗಳು ಇದೀಗ ಸಿಕ್ಕಾಪಟ್ಟೆ ಕಾಮನ್‌ ಆಗಿವೆ. ಅದಕ್ಕೆ ತಕ್ಕಂತೆಯೇ ಸೈಬರ್‌ ಖದೀಮರು ಆಕ್ಟೀವ್‌ ಆಗಿದ್ದಾರೆ. ಕೆಲ ದಿನಗಳ ಹಿಂದೆ ಬಿಡುಗಡೆಯಾದ ವಿಶ್ವ ಸೈಬರ್‌ ಅಪರಾಧ ಸೂಚ್ಯಂಕದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ 10ನೇ ಸ್ಥಾನದಲ್ಲಿದೆ ಎಂಬುದನ್ನು ತೋರಿಸಿದೆ.

ಸೈಬರ್‌ ಅಪರಾಧದ ಮೂಲ ಹಾಗೂ ಯಾವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಸೈಬರ್‌ ಅಪರಾಧಗಳು ಘಟಿಸುತ್ತವೆ ಎಂಬುದನ್ನು ಪತ್ತೆ ಹಚ್ಚಲು ಆಕ್ಸ್‌ಫರ್ಡ್‌ ವಿವಿ, ನ್ಯೂ ಸೌತ್‌ ವೇಲ್ಸ್‌ ವಿವಿ, ಮೊನಾಶ್‌ ವಿವಿ ಹಾಗೂ ಅಂತಾರಾಷ್ಟ್ರೀಯ ಸಂಶೋಧನಾ ಸಂಸ್ಥೆಯಾದ ಸೈನ್ಸ್‌ ಪೊ ನಡೆಸಿದ ಅಧ್ಯಯನ ಇದಾಗಿದೆ. ಇದೀಗ ಡಿಜಿಟಲ್‌ ಅರೆಸ್ಟ್‌, ಇತರ ಸೈಬರ್‌ ವಂಚನೆ ಮುನ್ನೆಲೆಗೆ ಬಂದಿದ್ದಕ್ಕೆ ಕಾರಣವೂ ಇದೆ.

ಇದೀಗ ಕರ್ನಾಟಕಕ್ಕೂ ಈ ಸೈಬರ್‌ ಭೂತ ಕಾಡುತ್ತಿದೆ. ಈ ವರ್ಷ ಜನವರಿಯಿಂದ ಜುಲೈವರೆಗೆ ನಡೆದ ಒಟ್ಟು ಸೈಬರ್‌ ಅಪರಾಧಗಳಲ್ಲಿ ವಂಚಕರು ಸುಮಾರು 861 ಕೋಟಿಯಷ್ಟು ಹಣ ದೋಚಿದ್ದಾರೆಂದು ತಿಳಿದುಬಂದಿದೆ. ಬೆರಳೆಣಿಕೆಯ ಪ್ರಕರಣಗಳಿಗಷ್ಟೇ ಪರಿಹಾರ ಸಿಕ್ಕರೂ ಉಳಿದ ಪ್ರಕರಣಗಳ ಸುಳಿವು ಪತ್ತೆಯಾಗದಂತಾಗಿದೆ.

ಕಳೆದ ವರ್ಷ ಡಿಜಿಟಲ್ ಅರೆಸ್ಟ್ ಮತ್ತು ಇತರ ಸೈಬರ್ ವಂಚನೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೇ ತಮ್ಮ ʻಮನದ ಮಾತು’ ಬಾನುಲಿ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿರುವುದು ಎಷ್ಟು ಗಂಭೀರ ಎಂಬುದನ್ನು ಸೂಚಿಸಿತ್ತು. ವಂಚಕರು ಪೊಲೀಸ್, ಸಿಬಿಐ, ಡ್ರಗ್ಸ್ ತಡೆ ಘಟಕ ಮತ್ತು ಕೆಲವೊಮ್ಮೆ ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕಾರಿಗಳ ಹೆಸರು ಹೇಳಿಕೊಂಡು ವಂಚಿಸಲು ಯತ್ನಿಸುತ್ತಾರೆ. ಅವರು ಒಡ್ಡುವ ಮಾನಸಿಕ ಒತ್ತಡ ಎಷ್ಟಿರುತ್ತದೆ ಎಂದರೆ ಸಂತ್ರಸ್ತರು ದಿಗಿಲುಗೊಳ್ಳುತ್ತಾರೆ ಎಂದು ಪ್ರಧಾನಿ ಹೇಳಿದ್ದರು. ಆದಾಗ್ಯೂ ಕೆಲ ಜನರು ದುಪ್ಪಟ್ಟು ಹಣದ ಆಸೆಗೆ, ಇನ್ನೂ ಕೆಲವರು ಕಾಮಪ್ರಚೋದನೆಗೆ ಸಿಲುಕಿ ಸೈಬರ್‌ ಅಪರಾಧಗಳಿಗೆ ಒಳಗಾಗುತ್ತಿದ್ದಾರೆ. 

ಹೆಚ್ಚಾಗಿ ಈ ಸೈಬರ್‌ ವಂಚನೆಗೆ ಬಲಿಯಾಗಿರೋದು ವಿದ್ಯಾರ್ಥಿಗಳು, ಪಿಂಚಣಿದಾರರು, ಅನುಭವಿ ವೃತ್ತಿಪರರು. ಗಿಫ್ಟ್‌ ಹೆಸರಿನಲ್ಲಿ ಬರುವ ನಕಲಿ ಲಿಂಕ್‌ಗಳನ್ನು ಕ್ಲಿಕ್‌ ಮಾಡುವುದು, ಒಟಿಪಿ (ಒನ್‌ ಟೈಮ್‌ ಪಾಸ್‌ವರ್ಡ್‌) ಹಂಚಿಕೊಳ್ಳುವುದು, ಬ್ಲ್ಯಾಕ್‌ಮೇಲ್‌ಗೆ ಒಳಗಾಗುವುದು ಹಾಗೂ ಡೇಟಿಂಗ್‌ ಆಪ್‌ಗಳಲ್ಲಿ ಹುಡುಗಿಯರ ಮೋಹಕ್ಕೆ ಸಿಕ್ಕಿ ಬಳಿಕ ಬೆದರಿಕೆಗೆ ಒಳಗಾಗುವುದು. ಕೆಲವರು ಎಟಿಎಂ ಪಡೆದು ಹಣ ಡಬಲ್‌ ಮಾಡಿಕೊಡುವುದಾಗಿ ವಂಚಿಸುವುದು. ವಿದ್ಯಾವಂತರಿಗೆ ಕ್ರಿಪ್ಟೋ ಕರೆನ್ಸಿ ಮೂಲಕ ದುಪ್ಪಟ್ಟು ಹಣ ಮಾಡುವ ಆಮಿಷ ಒಡ್ಡುವುದು. ಈ ರೀತಿಯ ಕೃತ್ಯಗಳಿಂದಲೇ ಹೆಚ್ಚಾಗಿ ಹಣ ಕಳೆದುಕೊಂಡಿರುವುದಾಗಿ ಸೈಬರ್‌ ತಜ್ಞರು ಹೇಳಿದ್ದಾರೆ.

ಸೈಬರ್‌ ತನಿಖಾಧಿಕಾರಿಗಳು ಹೇಳುವಂತೆ ಅಪರಾಧ ನಡೆದ 24 ಗಂಟೆಯಲ್ಲಿ ವರದಿ ಮಾಡಿದ್ರೆ, ಬ್ಯಾಂಕ್‌ಗಳನ್ನ ಅಲರ್ಟ್‌ ಮಾಡಬಹುದು, ಅಪರಾಧಿಯ ಪತ್ತೆಗೆ ಪ್ರಯತ್ನಿಸಬಹುದು. ಆದ್ರೆ ಕೆಲವರು ಭಯದಿಂದ, ಇನ್ನು ಕೆಲವರು ಮರ್ಯಾದೆಗೆ ಅಂಜಿ ಪ್ರಕರಣವನ್ನು ಹೇಳಿಕೊಳ್ಳದೇ ಮುಚ್ಚಿಡುತ್ತಿದ್ದಾರೆ. ಕೆಲವರು 2-3 ದಿನ ಕಳೆದು ವರದಿ ಮಾಡುವ ಹೊತ್ತಿಗೆ ಹಣವೆಲ್ಲ ಡಜನ್‌ಗಟ್ಟಲೇ ಖಾತೆಗಳಿಗೆ ಹಂಚಿಹೋಗಿರುತ್ತದೆ. ಬಳಿಕ ಸೈಬರ್‌ ವಂಚಕರು ಅದನ್ನು ಕ್ರಿಪ್ಟೋ ಕರೆನ್ಸಿ ಆಗಿ ಬದಲಾಯಿಸಿಕೊಂಡು ಕಣ್ಮರೆಯಾಗ್ತಿದ್ದಾರೆ. ಹೀಗಾಗಿ ವಂಚಕರನ್ನ ಪತ್ತೆಹಚ್ಚುವುದು ಕಷ್ಟಸಾಧ್ಯವಾಗುತ್ತಿದೆ ಎನ್ನುತ್ತಾರೆ ಸೈಬರ್‌ ತಜ್ಞರು.

ಆನ್‌ಲೈನ್‌ನಲ್ಲಿ ವ್ಯವಹರಿಸುವ ಮುನ್ನ ಎಚ್ಚರ ಇರಲಿ, ಗೊತ್ತಿಲ್ಲದ ವಿಷಯಗಳ ಮೇಲೆ ಕ್ಲಿಕ್‌ ಮಾಡುವ ಮುನ್ನ ಗೊತ್ತಿರುವವರನ್ನು ಕೇಳಿ ತಿಳಿದುಕೊಂಡು ನಂತರ ಮುಂದುವರಿಯಿರಿ.

ಇದನ್ನೂ ಓದಿ