ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಿಂದ ವಾರಾಣಸಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಮಾರ್ಗಮಧ್ಯೆ ಬೆಂಗಳೂರಿನ ಪ್ರಯಾಣಿಕನೊಬ್ಬ ಶೌಚಾಲಯವೆಂದು ವಿಮಾನದ ಕಾಕ್‌ಪಿಟ್ ಬಾಗಿಲನ್ನು ತೆರೆಯಲು ಯತ್ನಿಸಿದ ಆತಂಕಕಾರಿ ಘಟನೆ ಸೋಮವಾರ ನಡೆದಿದೆ.
ಸೋಮವಾರ ಬೆಳಿಗ್ಗೆ 8 ಗಂಟೆಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ IX-1086 ಬೆಂಗಳೂರಿನಿಂದ ವಾರಾಣಸಿಗೆ ತೆರಳುತ್ತಿತ್ತು. ಟೇಕಾಫ್ ಆದ ಕೆಲವೇ ಕ್ಷಣದಲ್ಲಿ ಪ್ರಯಾಣಿಕನೊಬ್ಬ ಕಾಕ್ ಪಿಟ್ ಪ್ರದೇಶ ಪ್ರವೇಶಿಸಿದ್ದಲ್ಲದೆ, ಅದರ ಬಾಗಿಲನ್ನು ಸಹ ತೆರೆಯಲು ಪ್ರಯತ್ನಸಿದ್ದಾನೆ.
ಕಾಕ್‌ಪಿಟ್ ಬಾಗಿಲು ತೆರೆಯಬೇಕೆಂದರೆ ಪಾಸ್‌ಕೋಡ್ ನಮೂದಿಸುವುದು ಅಗತ್ಯ. ಪಾಸ್‌ಕೋಡ್ ಹಾಕಿದ ನಂತರ ಪೈಲಟ್ ಬಾಗಿಲನ್ನು ತೆರೆಯಲು ಅವಕಾಶ ನೀಡಬಹುದು. ಹೀಗಾಗಿ ಬಾಗಿಲು ತೆರೆಯಲು ಸಾಧ್ಯವಾಗದ ಕಾರಣ ಮರಳಿ ತನ್ನ ಸೀಟ್‌ಗೆ ಬಂದು ಕುಳಿತಿದ್ದಾನೆ.
ಇತರ 8 ಪ್ರಯಾಣಿಕರೊಂದಿಗೆ ಆತ ತೆರಳುತ್ತಿದ್ದ. ಅದು ಅವನ ಮೊದಲ ವಿಮಾನ ಪ್ರಯಾಣವಾಗಿತ್ತು. ಆದರೆ ವಿಮಾನಕ್ಕೆ ಯಾವುದೇ ರೀತಿಯ ಭದ್ರತಾ ಬೆದರಿಕೆ ಒಡ್ಡಿಲ್ಲ ಎಂದು ತಿಳಿದುಬಂದಿದೆ.
ಆರಂಭದಲ್ಲಿ ವ್ಯಕ್ತಿ ಸರಿಯಾದ ಪಾಸ್‌ಕೋಡ್ ಅನ್ನು ಒತ್ತಿದ್ದಾನೆಂಬಊಹಾಪೋಹವಿತ್ತು, ಆದರೆ, ಏರ್ ಇಂಡಿಯಾ ಸ್ಪಷ್ಟನೆ ನೀಡಿದೆ. ಕಾಕ್‌ಪಿಟ್ ಪ್ರವೇಶ ಕೋಡ್ ಪೈಲಟ್‌ಗಳು ಮತ್ತು ಕ್ಯಾಬಿನ್ ಸಿಬ್ಬಂದಿಗೆ ಮಾತ್ರ ತಿಳಿದಿರುತ್ತದೆ. ಇತರೆ ವ್ಯಕ್ತಿಗಳಿಗೆ ಮಾಹಿತಿ ಇರುವುದಿಲ್ಲ ಎಂದು ತಿಳಿಸಿದೆ.