Tuesday, September 23, 2025

ಜಾತಿ ಗಣತಿ ಮುಂದೂಡಿ: ಒಕ್ಕಲಿಗರ ನಿಯೋಗದಿಂದ ಖರ್ಗೆಗೆ ಮನವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಮುಂದೂಡುವಂತೆ ಒಕ್ಕಲಿಗ ಮುಖಂಡರ ನಿಯೋಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಮನವಿ ಮಾಡಿದೆ.

ರಾಜ್ಯ ಒಕ್ಕಲಿಗ  ಮೀಸಲಾತಿ ಸಮಿತಿಯ ಮುಖ್ಯ ಸಂಚಾಲಕ ನಾಗರಾಜ್ ಯಲಚವಾಡಿ ನೇತೃತ್ವದಲ್ಲಿ ಖರ್ಗೆ ಅವರನ್ನು ಭೇಟಿ ಮಾಡಿದ ನಿಯೋಗ ಮನವಿ ಸಲ್ಲಿಕೆ ಮಾಡಿದೆ. ಈ ವಿಚಾರವಾಗಿ ನಂತರ ಪ್ರತಿಕ್ರಿಯೆ ನೀಡಿದ ನಿಯೋಗ, ‘ಸುಮಾರು 800 ಜಾತಿಗಳಿದ್ದವು. ಈಗ, ಹಿಂದುಳಿದ ವರ್ಗಗಳ ಆಯೋಗವು 1,561 ಜಾತಿಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಯಾವುದೇ ವಿಚಾರಣೆ ಅಥವಾ ಮಾನವಶಾಸ್ತ್ರೀಯ ಅಧ್ಯಯನಗಳಿಲ್ಲದೆ ಜಾತಿಗಳನ್ನು ಸೇರಿಸಲಾಗಿದೆ. ಇದಲ್ಲದೆ, ಸರ್ಕಾರವು ಸಮೀಕ್ಷಾ ಅಪ್ಲಿಕೇಶನ್‌ನಲ್ಲಿ ಸರಿಯಾದ ತರಬೇತಿಯನ್ನು ನೀಡಿಲ್ಲ’ ಎಂದು ತಿಳಿಸಿದೆ.

ಈ ಎಲ್ಲ ಕಾರಣಗಳಿಂದಾಗಿ ನಾವು ಸಮೀಕ್ಷೆಯನ್ನು ಮುಂದೂಡಲು ಕೇಳಿದ್ದೇವೆ ಎಂದು ನಾಗರಾಜ್ ಯಲಚವಾಡಿ ಹೇಳಿದ್ದಾರೆ. ಈಗಾಗಲೇ ಸರ್ಕಾರ ಹೇಳಿರುವಂತೆ ಸಮೀಕ್ಷೆಯನ್ನು ಕೇವಲ 15 ದಿನಗಳಲ್ಲಿ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದರು. ನಮ್ಮ ಅರ್ಜಿಯನ್ನು ಪರಿಶೀಲಿಸುವುದಾಗಿ ಖರ್ಗೆ ಭರವಸೆ ನೀಡಿದ್ದಾರೆ ಎಂದು ಯಲಚವಾಡಿ ಹೇಳಿದ್ದಾರೆ.

ಇದನ್ನೂ ಓದಿ