Monday, October 6, 2025

ಛತ್ತೀಸ್‌ಗಢದ ಐದು ಜಿಲ್ಲೆಗಳಲ್ಲಿ 66 ನಕ್ಸಲರು ಶರಣಾಗತಿ: ಸರಕಾರದಿಂದ ಆರ್ಥಿಕ ನೆರವು!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಛತ್ತೀಸ್‌ಗಢದ ಬಸ್ತಾರ್ ವಿಭಾಗದ ಐದು ಜಿಲ್ಲೆಗಳಲ್ಲಿ ಒಟ್ಟು 2.27 ಕೋಟಿ ಬಹುಮಾನ ಘೋಷಿಸಲ್ಪಟ್ಟ 49 ಮಂದಿ ಸಹಿತ 66 ನಕ್ಸಲೀಯರು ಗುರುವಾರ ಶರಣಾಗಿದ್ದಾರೆ.

ಬಿಜಾಪುರದಲ್ಲಿ 25 ನಕ್ಸಲೀಯರು, ದಾಂತೇವಾಡದಲ್ಲಿ 15, ಕಾಂಕೇರ್‌ನಲ್ಲಿ 13, ನಾರಾಯಣಪುರದಲ್ಲಿ ಎಂಟು ಮತ್ತು ಸುಕ್ಮಾದಲ್ಲಿ ಐದು ಮಂದಿ ನಕ್ಸಲರು ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗಿದ್ದಾರೆ. ಇವರಲ್ಲಿ 27 ಮಹಿಳೆಯರು ಸೇರಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಹಿರಿಯ ಪೊಲೀಸ್, ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಗಡಿ ಭದ್ರತಾ ಪಡೆ (BSF) ಮತ್ತು ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP)ಸಿಬ್ಬಂದಿ ಮುಂದೆ ನಕ್ಸಲೀಯರು ಶರಣಾಗಿದ್ದಾರೆ.

ಛತ್ತೀಸ್ ಗಢ ಸರ್ಕಾರದ ದೂರದ ಹಳ್ಳಿಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸುವ ‘ನಿಯಾದ್ ನೆಲ್ಲನಾರ್’ ಯೋಜನೆ ಮತ್ತು ಶರಣಾದ ನಕ್ಸಲೀಯರಿಗೆ ಪುನರ್ವಸತಿ ನೀತಿಯಿಂದ ಪ್ರಭಾವಿತರಾಗಿ ಶರಣಾಗಿರುವುದಾಗಿ ನಕ್ಸಲೀಯರು ಹೇಳಿಕೊಂಡಿದ್ದಾರೆ.

ಬಿಜಾಪುರದಲ್ಲಿ ಶರಣಾದ 25 ನಕ್ಸಲೀಯರಲ್ಲಿ 23 ಮಂದಿಗೆ ರೂ. 1.15 ಕೋಟಿ ಬಹುಮಾನ ಘೋಷಿಸಲಾಗಿತ್ತು ಎಂದು ಬಿಜಾಪುರ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ಯಾದವ್ ಮಾಹಿತಿ ನೀಡಿದ್ದಾರೆ.

ದಾಂತೇವಾಡದಲ್ಲಿ ಶರಣಾದ 15 ನಕ್ಸಲೀಯರಲ್ಲಿ ಐವರಿಗೆ ರೂ. 17 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ದಾಂತೇವಾಡ ಹೆಚ್ಚುವರಿ ಎಸ್ ಪಿ ಉದಿತ್ ಪುಷ್ಕರ್ ಹೇಳಿದ್ದಾರೆ.

ಕಾಂಕೇರ್ ನಲ್ಲಿ 13, ನಾರಾಯಣಪುರದಲ್ಲಿ 8 ಮತ್ತು ಸುಕ್ಮಾದಲ್ಲಿ 5 ಮಂದಿ ನಕ್ಸಲೀಯರು ಶರಣಾಗಿದ್ದಾರೆ. ಅವರೆಲ್ಲರಿಗೂ ತಲಾ ರೂ. 50,000 ಆರ್ಥಿಕ ನೆರವು ನೀಡಲಾಗುವುದು ಹಾಗೂ ರಾಜ್ಯ ಸರ್ಕಾರದ ಪುನರ್ವಸತಿ ನೀತಿಯಡಿ ಪುನರ್ವಸತಿ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.