ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ಮುಖಂಡರ ನಿಯೋಗವು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಮಧುಸೂಧನ್ ನಾಯಕ್ ಅವರನ್ನು ಭೇಟಿಯಾಗಿ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಬಳಸಲಾಗುವ ಆ್ಯಪ್‌ನಲ್ಲಿ 14 ಕ್ರೈಸ್ತ ಎಸ್‌ಸಿ-ಎಸ್‌ಟಿ ಜಾತಿಗಳನ್ನು ಪಟ್ಟಿ ಮತ್ತು ಡ್ರಾಪ್‌ಡೌನ್‌ನಲ್ಲಿ ಕಾಣದಂತೆ ಮಾಡಬೇಕೆಂದು ಮನವಿ ಸಲ್ಲಿಸಿದೆ.
ಈ ಮನವಿಯನ್ನು ಗಮನದಲ್ಲಿಟ್ಟುಕೊಂಡು, ಮಧುಸೂಧನ್ ನಾಯಕ್ ಅಧ್ಯಕ್ಷತೆಯಲ್ಲಿ ಆಯೋಗದ ಸದಸ್ಯರ ಸಭೆ ನಡೆಯಿತು. ಸಭೆಯಲ್ಲಿ ಆಕ್ಷೇಪಿತ 14 ಜಾತಿಗಳನ್ನು ಸಮೀಕ್ಷಾ ಪಟ್ಟಿಯನ್ನು ಆ್ಯಪ್‌ನಿಂದ ಕೈಬಿಡುವ ನಿರ್ಧಾರ ಕೈಗೊಂಡು ಕಾನೂನು ಮತ್ತು ದತ್ತಾಂಶದ ಗೊಂದಲಗಳನ್ನು ತಪ್ಪಿಸಲು ಕ್ರಮ ತೆಗೆದುಕೊಂಡರು.
ಆ. 23ರಂದು ಆಯೋಗವು ಸಮೀಕ್ಷೆಗೆ 1,400 ಜಾತಿಗಳ ಪಟ್ಟಿ ಘೋಷಿಸಿತ್ತು. ಅದರಲ್ಲಿ 48 ಹಿಂದು ಜಾತಿಗಳನ್ನು ಕ್ರೈಸ್ತ ಎಂದು ಗುರುತಿಸಲಾಗಿತ್ತು. ಈ ಪಟ್ಟಿಯಲ್ಲಿ 15 ಎಸ್‌ಸಿ ಹಾಗೂ 1 ಎಸ್ಟಿ ಜಾತಿ ಇದ್ದವು. ರಾಜ್ಯಾದ್ಯಂತ ಈ ಜಾತಿ ಗುರುತಿನ ವಿಷಯದಲ್ಲಿ ಆಕ್ರೋಶ ವ್ಯಕ್ತವಾಯಿತು. ಸೆ. 2ರಂದು ಬಿಜೆಪಿ ನಿಯೋಗ ಆಯೋಗವನ್ನು ಭೇಟಿಯಾಗಿ ಚರ್ಚೆ ನಡೆಸಿ ಆಕ್ಷೇಪಣೆ ಸಲ್ಲಿಸಿತ್ತು.
ಆಯೋಗದ ಸ್ಪಷ್ಟನೆ
ಆಯೋಗವು 33 ಕ್ರೈಸ್ತ ಜಾತಿಗಳ ಬಗ್ಗೆ ಈಗಾಗಲೇ ಸ್ಪಷ್ಟನೆ ನೀಡಿದರೂ, ಉಳಿದ ದಲಿತ ಕ್ರೈಸ್ತ ಜಾತಿಗಳ ಕುರಿತು ಮಾಹಿತಿ ನೀಡದೇ ಉಳಿಸಿರುವುದು ಗೊಂದಲಕಾರಿಯಾಗುತ್ತದೆ. ನಿಯೋಗವು ಸಮೀಕ್ಷಾ ಆ್ಯಪ್‌ನಲ್ಲಿ ಕೂಡ ಈ 14 ಕ್ರೈಸ್ತ ಎಸ್‌ಸಿ ಜಾತಿಗಳನ್ನು ಹೈಡ್ ಮಾಡಬೇಕು ಮತ್ತು ಅಧಿಕೃತ ಪ್ರಕಟಣೆ ನೀಡಿ ಸಾರ್ವಜನಿಕರಿಗೆ ಸ್ಪಷ್ಟನೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ.