ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯಲ್ಲಿ ಸೆಷನ್ಸ್ ನ್ಯಾಯಾಲಯವು ಪ್ರಮುಖ ತೀರ್ಮಾನಕ್ಕೆ ಮುಂದಾಗಿದೆ. ಸೆಪ್ಟೆಂಬರ್ 25ರಂದು ಆರೋಪಿಗಳ ವಿರುದ್ಧದ ದೋಷಾರೋಪಣೆ ಅಧಿಕೃತವಾಗಿ ನಿಗದಿಪಡಿಸಲಾಗುತ್ತಿದೆ.
ಈ ಪ್ರಕರಣದಲ್ಲಿ 17 ಮಂದಿ ಆರೋಪಿಗಳನ್ನು ಸೆ. 25ರಂದು ಸೆಷನ್ಸ್ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ. ಆರೋಪಿಗಳ ಪಟ್ಟಿಯಲ್ಲಿ ನಟ ದರ್ಶನ್, ಪವಿತ್ರಾ ಗೌಡ, ಪವನ್, ರಾಘವೇಂದ್ರ, ನಂದೀಶ್, ಜಗದೀಶ್, ಅನು, ರವಿ, ಧನರಾಜು, ವಿನಯ್, ನಾಗರಾಜ್, ಲಕ್ಷ್ಮಣ್, ದೀಪಕ್, ಪ್ರದೋಶ್, ಕಾರ್ತಿಕ್, ಕೇಶವಮೂರ್ತಿ ಮತ್ತು ನಿಖಿಲ್ ಮೂರ್ತಿ ಇದ್ದಾರೆ. ಈ ದೋಷಾರೋಪಣೆಯಲ್ಲಿ ಅಪಹರಣ, ಕೊಲೆ, ಸುಲಿಗೆ, ಸಾಕ್ಷ್ಯ ನಾಶ ಸೇರಿದಂತೆ ಹಲವು ಆರೋಪಗಳು ಒಳಗೊಂಡಿವೆ.
ಇದೀಗ ಸೆಷನ್ಸ್ ನ್ಯಾಯಾಲಯ ದೋಷಾರೋಪಣೆಗೆ ಮುಂಚೆ ಹಲವಾರು ಸಂಬಂಧಿತ ಅರ್ಜಿಗಳನ್ನು ಪರಿಶೀಲಿಸಿದ್ದು, ಪ್ರದೋಷ್ ಮತ್ತು ದೀಪಕ್ ಸೇರಿದಂತೆ ಕೆಲ ಆರೋಪಿಗಳ ಕೇಸ್ ಡಿಸ್ಚಾರ್ಜ್ ಅರ್ಜಿಗಳನ್ನು ತಿರಸ್ಕರಿಸಿದೆ. ಇದರಿಂದ ಆರೋಪಿಗಳ ವಿರುದ್ಧದ ಪ್ರಕರಣ ಮುಂದುವರಿಯುವ ಸಾಧ್ಯತೆ ಇದೆ.
ನ್ಯಾಯಾಲಯವು ಸೆಪ್ಟೆಂಬರ್ 25ರಂದು ದೋಷಾರೋಪಣೆ ಮತ್ತು ಜೈಲು ಹಾಸಿಗೆ, ದಿಂಬು ಸೇರಿದಂತೆ ಮೂಲ ಸೌಕರ್ಯ ನೀಡುವ ಕುರಿತು ಆದೇಶವನ್ನು ಪ್ರಕಟಿಸಲು ನಿರ್ಧರಿಸಿದೆ. ಈ ಪ್ರಕರಣದ ನಿರ್ಣಯವು ಸಾರ್ವಜನಿಕ, ಸಾಮಾಜಿಕ ಮತ್ತು ಕಾನೂನು ದೃಷ್ಟಿಯಿಂದ ಗಮನಾರ್ಹವಾಗಿದೆ.