ಹೊರಗೆ ಹೋದಾಗ ಚಾಟ್ಸ್, ಸ್ನಾಕ್ಸ್ ತಿನ್ನದೇ ಇರೋದು ಅಸಾಧ್ಯ. ಅದರಲ್ಲೂ ಗೋಬಿ ಐಟಂಗಳು ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರಿಗೂ ಬಹಳ ಇಷ್ಟ. ಆದರೆ ಹೊರಗಡೆ ತಿನ್ನುವ ಬದಲು ಮನೆಯಲ್ಲಿ ಆರೋಗ್ಯಕರ ರೀತಿಯಲ್ಲಿ ಮಾಡಿಕೊಳ್ಳೋದು ತುಂಬಾ ಒಳ್ಳೆದಲ್ವಾ. ಇವತ್ತಿನ ನಮ್ಮ ವಿಶೇಷ ರೆಸಿಪಿಯಲ್ಲಿ ಗೋಬಿ ಪೆಪ್ಪರ್ ಡ್ರೈ ಯಾವ ರೀತಿ ಮಾಡೋದು ಅಂತ ನೋಡೋಣ.
ಬೇಕಾಗುವ ಸಾಮಗ್ರಿಗಳು:
ಹೂಕೋಸು – 2 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಮೈದಾ – 1 ಕಪ್
ಜೋಳದ ಹಿಟ್ಟು – ¾ ಕಪ್
ಅರಶಿಣ ಪೌಡರ್ – ½ ಚಮಚ
ಪೆಪ್ಪರ್ ಪೌಡರ್ – 1 ಚಮಚ
ಎಣ್ಣೆ – 2 ಚಮಚ (ಹುರಿಯಲು ಬೇಕಾದಷ್ಟು ಹೆಚ್ಚಿಸಿ)
ಜೀರಿಗೆ – ½ ಚಮಚ
ಸೊಂಪು – ½ ಚಮಚ
ಕರಿಬೇವು – ಸ್ವಲ್ಪ
ಹೆಚ್ಚಿದ ಈರುಳ್ಳಿ – 1
ಹೆಚ್ಚಿದ ಬೆಳ್ಳುಳ್ಳಿ – 5 ಕಡ್ಡಿ
ಹೆಚ್ಚಿದ ಶುಂಠಿ – ಸ್ವಲ್ಪ
ಹೆಚ್ಚಿದ ಕ್ಯಾಪ್ಸಿಕಂ – ½ ಕಪ್
ಜೀರಾ ಪೌಡರ್ – ½ ಚಮಚ
ಟೊಮೆಟೊ ಸಾಸ್ – 2 ಚಮಚ
ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಚಮಚ
ಮಾಡುವ ವಿಧಾನ:
ಮೊದಲಿಗೆ ಹೂಕೋಸನ್ನು ಬಿಸಿ ನೀರಿನಲ್ಲಿ ಸ್ವಲ್ಪ ಉಪ್ಪು ಹಾಕಿ ನೆನೆಸಿಡಿ. ಬಳಿಕ ಅದನ್ನು ನೀರಿನಿಂದ ತೆಗೆದು ಪಕ್ಕಕ್ಕೆ ಇಡಿ.
ಒಂದು ಬೌಲ್‌ನಲ್ಲಿ ಮೈದಾ, ಜೋಳದ ಹಿಟ್ಟು, ಅರಶಿಣ, ಪೆಪ್ಪರ್ ಪೌಡರ್, ಉಪ್ಪು ಹಾಕಿ, ನೀರು ಸೇರಿಸಿ ಚನ್ನಾಗಿ ಮಿಶ್ರಣ ತಯಾರಿಸಿ.ಈಗ ಹೂಕೋಸನ್ನು ಈ ಮಿಶ್ರಣದಲ್ಲಿ ಅದ್ದಿ, ಬಿಸಿ ಎಣ್ಣೆಯಲ್ಲಿ ಕರಿಯಿರಿ.
ಈಗ ಬೇರೆ ಪ್ಯಾನ್‌ನಲ್ಲಿ ಸ್ವಲ್ಪ ಎಣ್ಣೆ ಹಾಕಿ ಜೀರಿಗೆ, ಸೊಂಪು, ಕರಿಬೇವು ಹಾಕಿ, ಅದಕ್ಕೆ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಕ್ಯಾಪ್ಸಿಕಂ ಹಾಕಿ ಚೆನ್ನಾಗಿ ಫ್ರೈ ಮಾಡಿ. ಬಳಿಕ ಜೀರಾ ಪೌಡರ್, ಪೆಪ್ಪರ್ ಪೌಡರ್, ಉಪ್ಪು, ಟೊಮೆಟೊ ಸಾಸ್ ಹಾಕಿ ತಿರುವಿಕೊಳ್ಳಿ. ಈಗ ಈ ಮಿಶ್ರಣಕ್ಕೆ ಹುರಿದ ಗೋಬಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಬಿಸಿಬಿಸಿ ಸರ್ವ್ ಮಾಡಿ.