ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ಹಿಂದು ಜನಸಂಖ್ಯೆ ಕುಸಿತವಾಗಲು ಶತಮಾನಗಳ ವಿದೇಶಿ ಆಕ್ರಮಣ ಮತ್ತು ವಸಾಹತುಶಾಹಿ ಆಳ್ವಿಕೆಯ ಪರಿಣಾಮ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಭಿಪ್ರಾಯಪಟ್ಟಿದ್ದಾರೆ.
ರಾಜಧಾನಿ ಲಖನೌದಲ್ಲಿ ‘ಆತ್ಮನಿರ್ಭರ ಭಾರತ-ಸ್ವದೇಶಿ ಸಂಕಲ್ಪ’ ಕುರಿತ ರಾಜ್ಯಮಟ್ಟದ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಯೋಗಿ ಆದಿತ್ಯನಾಥ್, ‘ವಿದೇಶಿ ಆಳ್ವಿಕೆ ಕಾಲದಲ್ಲಿ ಭಾರತದ ಸಂಪನ್ಮೂಲಗಳನ್ನು ಅಪಾರ ಪ್ರಮಾಣದಲ್ಲಿ ಕೊಳ್ಳೆ ಹೊಡೆಯಲಾಗಿದೆ’ ಎಂದು ಹೇಳಿದರು.
ಭಾರತವು ಶತಮಾನಗಳ ಕಾಲ ವಿದೇಶಿ ಆಕ್ರಮಣವನ್ನು ಎದುರಿಸಿದೆ. ಜೊತೆಗೆ ಬ್ರಿಟಿಷ್ ವಸಾಹತುಶಾಹಿ ಆಳ್ವಕೆಯು ಭಾರತದ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆದಿದ್ದಲ್ಲದೇ, ಇಲ್ಲಿನ ಜನರನ್ನು ಶೋಷಣೆಗೆ ಗುರಿಪಡಿಸಿತು. ಮಾತ್ರವಲ್ಲದೇ ಕಾಲಘಟ್ಟವು ಭಾರತದಲ್ಲಿ ಹಿಂದು ಜನಸಂಖ್ಯೆಯ ಗಮನಾರ್ಹ ಕುಸಿತಕ್ಕೂ ಕಾರಣವಾಯಿತು ಎಂದು ಹೇಳಿದರು.
ಕ್ರಿ.ಶ. 1100ರ ಅವಧಿಯಲ್ಲಿ ರ ವೇಳೆಗೆ ಸುಮಾರು 60 ಕೋಟಿಯಷ್ಟಿದ್ದ ಹಿಂದು ಜನಸಂಖ್ಯೆ, 1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆಯುವ ಹೊತ್ತಿಗೆ ಸುಮಾರು 30 ಕೋಟಿಗೆ ಇಳಿದಿತ್ತು. ಈ 800-900 ವರ್ಷಗಳಲ್ಲಿ ನಮ್ಮ ಜನಸಂಖ್ಯೆ ಹೆಚ್ಚಾಗಬೇಕಿತ್ತೇ ವಿನಃ ಕಡಿಮೆಯಾಗಬಾರದಿತ್ತು. ಇದಕ್ಕೆ ಏನು ಕಾರಣ ಎಂಬುದನ್ನು ನಾವು ತಿಳಿದುಕೊಳ್ಳ ಅಗತ್ಯವಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದರು.
ಬ್ರಿಟಿಷ್ ವಸಾಹತುಗಾರರು ಜಾತಿ, ಪ್ರದೇಶ, ಭಾಷೆ ಆಧಾರದ ಮೇಲೆ ಜನರನ್ನು ವಿಭಜಿಸಿದರು. ಇಂದಿಗೂ ಕೆಲವರು ಅದೇ ಮನಸ್ಥಿತಿಯೊಂದಿಗೆ ಭಾರತವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆಕ್ರೋಶ ಹೊರಹಾಕಿದರು.