ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಜಾತಿಗಣತಿ ಆರಂಭವಾಗಿದೆ. ಶಿಕ್ಷಕರು ಇನ್ನಿತರ ಸರ್ಕಾರಿ ಸಿಬ್ಬಂದಿ ಮನೆ ಮನೆಗೆ ತೆರಳಿ ಜಾತಿಗಣತಿ ಮಾಡುತ್ತಿದ್ದಾರೆ. ಈ ಜಾತಿಗಣತಿಗೆ ಸರ್ವರ್ ಜೊತೆಗೆ ನೆಟ್ವರ್ಕ್ ಕೂಡ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಸಮೀಕ್ಷೆ ಬಂದ ಶಿಕ್ಷಕರು ಮೊಬೈಲ್ ನೆಟ್ವರ್ಕ್ಗಾಗಿ ಮರ ಮತ್ತು ನಿರೀನ ಟ್ಯಾಂಕ್ ಹತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಮೊಬೈಲ್ ನೆಟ್ವರ್ಕ್ ಅನಿವಾರ್ಯ. ಆದರೆ ಮೊಬೈಲ್ ನೆಟ್ವರ್ಕ್ ಸಿಗದ ಕಾರಣ ಗಣತಿದಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬೀದರ್ ಜಿಲ್ಲೆಯ ಮಹಾರಾಷ್ಟ್ರದ ಗಡಿಯಲ್ಲಿ ಬರುವ ಔರಾದ್, ಕಮಲನಹರ, ಬಸವ ಕಲ್ಯಾಣ, ಹುಲಸೂರು ತಾಲೂಕಿನ ಕೆಲವು ಗ್ರಾಮ ಹಾಗೂ ತಾಂಡಾಗಳಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಉಂಟಾಗಿದೆ. ನೆಟ್ವರ್ಕ್ಗಾಗಿ ಶಿಕ್ಷಕರು ಮರ ಮತ್ತು ನೀರಿನ ಟ್ಯಾಂಕ್ ಹತ್ತಿದ ಆಶ್ಚರ್ಯಕರ ಸಂಗತಿಗಳು ನಡೆದಿವೆ.
ಸೆಪ್ಟೆಂಬರ್ 22 ರಂದು ಆರಂಭಗೊಂಡಿರುವ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಗೆ ಹಲವು ರೀತಿಯ ತಾಂತ್ರಿಕ ದೋಷದಿಂದ ಆರಂಭದಲ್ಲೇ ವಿಘ್ನ ಶುರುವಾದಂತಾಗಿದೆ. ನೆಟ್ವರ್ಕ್, ತರಬೇತಿ ಸೇರಿದಂತೆ ಹಲವು ರೀತಿಯ ಗೊಂದಲಗಳು ಸೃಷ್ಟಿಯಾಗಿವೆ.
ಸದ್ಯ ಜನಗಣತಿ ಆರಂಭಗೊಂಡು ಮೂರು ದಿನಗಳು ಕಳೆದರೂ ಪರಿಹಾರವಿಲ್ಲ. ಹೀಗಾಗಿ ಬೀದರ್ ಜಿಲ್ಲೆಯಲ್ಲಿ ವೇಗವಾಗಿ ಸರ್ವೆ ಕಾರ್ಯ ನಡೆಯುತ್ತಿಲ್ಲ. ಜಿಲ್ಲೆಯಲ್ಲಿ 3,381 ಜನರಿಂದ ಸರ್ವೆಕಾರ್ಯ ನಡೆಯುತ್ತಿದೆ. ಸುಮಾರು 3.69 ಲಕ್ಷ ಕುಟುಂಬದ ಸಮೀಕ್ಷೆ ಕಾರ್ಯ ನಡೆಯಬೇಕಿದೆ.
ಆರಂಭದಿಂದಲೂ ಧರ್ಮ, ಜಾತಿ, ಆರ್ಥಿಕ ಮಾಹಿತಿ ಯಾವ ರೀತಿ ನೀಡಬೇಕು ಎಂಬ ಗೊಂದಲಕ್ಕೆ ಒಳಗಾದ ಕುಟುಂಬಗಳು ಸೇರಿದಂತೆ ಗಣತಿದಾರರು ಇದೀಗ ನೆಟ್ವರ್ಕ್ ಸಿಗದೇ ಇರುವುದು ಇನ್ನೊಂದು ವಿಘ್ನ ಎದುರಾಗಿದೆ.