Thursday, September 25, 2025

ಅವರ ಕೃತಿಗಳು ಮುಂದಿನ ತಲೆಮಾರಿಗೆ ದಾರಿದೀಪ : ಎಸ್.ಎಲ್.ಭೈರಪ್ಪ ನಿಧನಕ್ಕೆ ಕಮಲ್ ಹಾಸನ್ ಸಂತಾಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ಖ್ಯಾತ ಕಾದಂಬರಿಕಾರ ಡಾ. ಎಸ್. ಎಲ್. ಭೈರಪ್ಪ ಅವರು ವಯೋಸಹಜ ಅಸ್ವಸ್ಥತೆಯಿಂದ ಸೆಪ್ಟೆಂಬರ್ 24 ರಂದು ಮಧ್ಯಾಹ್ನ ನಿಧನರಾದರು. ಅವರ ಅಗಲಿಕೆಯ ಸುದ್ದಿ ದೇಶದಾದ್ಯಂತ ಆಘಾತ ಮೂಡಿಸಿದ್ದು, ರಾಜಕೀಯ, ಸಾಹಿತ್ಯ ಹಾಗೂ ಸಿನಿಮಾ ಕ್ಷೇತ್ರಗಳಿಂದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ತಮಿಳು ನಟ ಕಮಲ್ ಹಾಸನ್ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಭಾವನೆ ಹಂಚಿಕೊಂಡಿದ್ದಾರೆ. “ಪುರಾಣಗಳ ಅಂತರಂಗದಲ್ಲಿರುವ ಇತಿಹಾಸವನ್ನು ಓದುವುದು ಹೇಗೆಂಬುದನ್ನು ನಮಗೆ ಕಲಿಸಿದಕ್ಕಾಗಿ ಧನ್ಯವಾದಗಳು ಸರ್. ನಮ್ಮ ಕಾಲದ ಶ್ರೇಷ್ಠ ಸಾಹಿತ್ಯ ಧ್ವನಿಗಳಲ್ಲಿ ಒಬ್ಬರಾದ ಭೈರಪ್ಪ ಅವರನ್ನು ಗೌರವದಿಂದಲೇ ನೋಡುತ್ತಿದ್ದೇವೆ. ಅವರ ಅಮರ ಕೃತಿಗಳು ಮುಂದಿನ ತಲೆಮಾರುಗಳಿಗೆ ದಾರಿದೀಪವಾಗಿರುತ್ತವೆ” ಎಂದು ಅವರು ಬರೆದುಕೊಂಡಿದ್ದಾರೆ.

ಡಾ. ಭೈರಪ್ಪ ಅವರು ‘ಪರ್ವ’, ‘ವಂಶವೃಕ್ಷ’, ‘ಯಾನ’, ‘ಗೃಹಭಂಗ’ ಮುಂತಾದ ಮಹತ್ವದ ಕೃತಿಗಳ ಮೂಲಕ ಸಾಹಿತ್ಯ ಲೋಕದಲ್ಲಿ ಅಚ್ಚಳಿಯದ ಗುರುತು ಬಿಟ್ಟಿದ್ದಾರೆ. ಸರಸ್ವತಿ ಸಮ್ಮಾನ್ ಸೇರಿದಂತೆ ಅನೇಕ ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡೆದ ಅವರು ಕನ್ನಡ ಸಾಹಿತ್ಯಕ್ಕೆ ಅಪಾರ ಕೀರ್ತಿ ತಂದಿದ್ದಾರೆ.

ಇದನ್ನೂ ಓದಿ