ಹೊಸದಿಗಂತ ಡಿಜಿಟಲ್ ಡೆಸ್ಕ್:
ದಸರಾ ಹಬ್ಬದ ಸಮಯದಲ್ಲಿ ಮೈಸೂರಿಗೆ ಪ್ರವಾಸಿಗರ ಸಂಚಾರ ಹೆಚ್ಚಾಗಿರುವುದನ್ನು ಗಮನಿಸಿ, ನೈಋತ್ಯ ರೈಲ್ವೆ ಹೆಚ್ಚುವರಿ ರೈಲುಗಳ ಸೇವೆಯನ್ನು ಆರಂಭಿಸಿದೆ. ಮೈಸೂರಿನ ದಸರಾ ಮಹೋತ್ಸವಕ್ಕೆ ಬಸ್ಸು ಮತ್ತು ರೈಲುಗಳಲ್ಲಿ ಪ್ರಯಾಣಿಕರ ಓಡಾಟ ಹೆಚ್ಚಾಗುವ ಕಾರಣ, ರೈಲ್ವೆ ಇಲಾಖೆ ವಿಶೇಷ ಕ್ರಮಗಳನ್ನು ಕೈಗೊಂಡಿದೆ.
ಈ ಬಾರಿ 11 ವಿಶೇಷ ರೈಲುಗಳು ಮತ್ತು 27 ಎಕ್ಸ್‌ಪ್ರೆಸ್ ರೈಲುಗಳ ಮೂಲಕ ಹೆಚ್ಚುವರಿ ಪ್ರಯಾಣ ಸೌಲಭ್ಯ ನೀಡಲಾಗುವುದು. ಕಳೆದ ವರ್ಷ ದಸರಾದ ಸಂದರ್ಭದಲ್ಲಿ 6.91 ಲಕ್ಷ ಪ್ರಯಾಣಿಕರು ಮೈಸೂರು ರೈಲ್ವೆ ವಿಭಾಗದ ಸೇವೆಗಳನ್ನು ಬಳಸಿದ್ದರು.
ಹೆಚ್ಚುವರಿ ರೈಲುಗಳು ಮತ್ತು ಸಂಪರ್ಕ
ಹೆಚ್ಚುವರಿ ರೈಲುಗಳು ಮೈಸೂರು, ಆಶೋಕ್ ಪುರಂ, ಬೆಂಗಳೂರು, ಬೆಳಗಾವಿ, ಯಶವಂತಪುರ, ಶಿವಮೊಗ್ಗ, ವಿಜಯಪುರ, ಅರಸೀಕೆರೆ, ಕಾರೈಕುಡಿ, ಮಡಗಾಂವ್, ರಾಮನಾಥಪುರಂ, ಚಾಮರಾಜನಗರ, ತಾಳಗುಪ್ಪ ಮತ್ತು ತಿರುವಲ್ವೇಲಿ ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತವೆ. ಈ ಸೇವೆಯಿಂದ ದಸರಾ ಪ್ರಯಾಣಿಕರಿಗೆ ನಿರ್ವಹಣೆ ಸುಲಭವಾಗುವುದು ನಿರೀಕ್ಷಿಸಲಾಗಿದೆ.
ಟಿಕೆಟ್ ಕೌಂಟರ್ ಮತ್ತು ನಿರ್ವಹಣೆಗೆ 70 ಮಂದಿ ಸಿಬ್ಬಂದಿ ನಿಯೋಜಿಸಲಾಗಿದೆ. ಹೆಚ್ಚುವರಿ 150 ಕ್ಕೂ ಹೆಚ್ಚು ಆರ್.ಪಿ.ಎ ಮತ್ತು ಜಿ.ಆರ್.ಪಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 50 ಸಿಸಿ ಟಿವಿ ಕ್ಯಾಮರಾಗಳು, ಪ್ರಯಾಣಿಕರಿಗೆ ಮಾಹಿತಿ ನೀಡಲು ಸಹಾಯಕ ಕಿಯೋಸ್ಕ್‌ಗಳು ಮತ್ತು 2 ಹೆಚ್ಚುವರಿ ಟಿಕೆಟ್ ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ.